ವಿಜಯಪುರ

ಬನ್ನಿ ವಿನಿಮಯದಿಂದ ಪ್ರೀತಿ, ಗೌರವ, ಸೌಹಾರ್ದ ವೃದ್ಧಿ: ಶಾಸಕ ಬೆಲ್ದಾಳೆ

ಬನ್ನಿ ವಿನಿಮಯದಿಂದ ಪ್ರೀತಿ, ಗೌರವ, ಸೌಹಾರ್ದ ವೃದ್ಧಿ: ಶಾಸಕ ಬೆಲ್ದಾಳೆ


ಬೀದರ್‌: ವಿಜಯದಶಮಿ ದಸರಾ ಹಬ್ಬದ ಪ್ರಯುಕ್ತ ಮಂಗಳವಾರ ಬೀದರ್ ನಗರದ ಕೆಇಬಿ ಹನುಮಾನ ದೇವಸ್ಥಾನದ ಬಳಿ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ​‍್ಿಸಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ಬಳಿಕ ಸಂಪ್ರದಾಯದಂತೆ ಬನ್ನಿ ಪೂಜೆ ನೆರವೇರಿಸಿ, ಬನ್ನಿ (ಬಂಗಾರ) ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ದಸರಾ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿಜಯದಶಮಿ ಹಬ್ಬವು ಸತ್ಯ, ಧರ್ಮ ಹಾಗೂ ನ್ಯಾಯದ ವಿಜಯದ ಸಂಕೇತವಾಗಿದೆ.  


ಬನ್ನಿ ವಿನಿಮಯದ ಸಂಪ್ರದಾಯವು ಪರಸ್ಪರ ಪ್ರೀತಿ, ಗೌರವ, ಸ್ನೇಹ ಮತ್ತು ಸೌಹಾರ್ದತೆಯನ್ನು ಬೆಸೆಯುವ ಮಹತ್ವದ ಆಚರಣೆಯಾಗಿದೆ. ಇಂತಹ ಹಬ್ಬಗಳು ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವದ ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತವೆ.ಈ ಸಂದರ್ಭದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷ ನೆಲೆಸಲಿ ಎಂದು ಹಾರೈಸಿದರು. 


ಕಾರ್ಯಕ್ರಮದಲ್ಲಿ ಕಾಶಿನಾಥ ಬೆಲ್ದಾಳೆ, ಶಾಂತಕುಮಾರ ಮುದಾಳೆ, ವಕೀಲರಾದ ಧೂಳಪ್ಪ ಬಿರಾದಾರ, ವೀರಶೆಟ್ಟಿ ಖ್ಯಾಮಾ, ಶಿವಕುಮಾರ ಪಾಟೀಲ ಸೋಲಪುರ, ಅನೀಲ ಪಾಟೀಲ, ನಿರಂಜಪ್ಪ ಕಮಠಾಣಾ, ಮಲ್ಲಶೆಟ್ಟಿ ಮೂಲಗೆ, ವಿಕ್ರಮ ಮುದಾಳೆ, ಕಿರಣ್ ಬೆಲ್ದಾಳೆ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ