ಕಾರವಾರ

ಐದು ದಿನಗಳ ಬ್ಯಾಂಕಿಂಗ್ ಬೇಡಿಕೆ ; ಕಾರವಾರದಲ್ಲಿ ಬ್ಯಾಂಕ್ ನೌಕರರ ಮತ ಪ್ರದರ್ಶನ

ಐದು ದಿನಗಳ ಬ್ಯಾಂಕಿಂಗ್ ಬೇಡಿಕೆ ; ಕಾರವಾರದಲ್ಲಿ ಬ್ಯಾಂಕ್ ನೌಕರರ ಮತ ಪ್ರದರ್ಶನ

                  ಕಾರವಾರ 31 : ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಬುಧುವಾರ ಮತ ಪ್ರದರ್ಶನ ನಡೆಸಿ ಘೋಷಣೆಗಳನ್ನು ಮೊಳಗಿಸಿದರು. ಬ್ಯಾಂಕ್ ವೀಲೀನೀಕರಣ ,ಅಗತ್ಯ ಸಿಬ್ಬಂದಿಗಳ ಕೊರತೆ, ದಿನ ನಿತ್ಯ ಹೊಸದಾಗಿ ಪರಿಚಯಿಸಲ್ಪಡುವ ತಂತ್ರಜ್ಞಾನದ ಬಳಕೆಯಲ್ಲಿನ ಗೊಂದಲ ಗಳ ಒತ್ತಡದಿಂದಾಗಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿ ಬಸವಳಿದಿರುವ ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಎರಡು ದಿನಗಳ ರಜೆಗೆ ಬೇಡಿಕೆ ಸಲ್ಲಿಸಿ ಹೋರಾಟದ ಹಾದಿ ಹಿಡಿದಿದ್ದಾರೆ.

                 ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಹಾಗೂ ಅಧಿಕಾರಿಗಳ ಸಂಘಟನೆಗಳ ಒಕ್ಕೂಟ - ಯುಎಫ್ ಬಿ ಯು ನೀಡಿರುವ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ಆಶ್ರಯದಲ್ಲಿ ಮಂಗಳವಾರ ಸಂಜೆ ಕಾರವಾರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಜಮಾಯಿಸಿದ 80ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಬ್ಯಾಂಕ್ ಉದ್ಯೋಗಿಗಳು ನಿರಂತರ ಒಂದು ಗಂಟೆಗಳ ಕಾಲ ಘೋಷಣೆಗಳನ್ನು ಒಳಗಿಸಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದರು. ಮತ ಪ್ರದರ್ಶನಕಾರರನ್ನುದ್ದೇಶಿಸಿ ಮಾತನಾಡಿದ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಘಟಕ ವಾಸುದೇವ ಶೇಟ್,

                 ಕೆಲಸದ ಒತ್ತಡದಿಂದ ಬಳಲುತ್ತಿರುವ ಬ್ಯಾಂಕ್ ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಅವಶ್ಯಕತೆಯಾಗಿ ದೇಶಾದ್ಯಂತ ಐದು ದಿನಗಳ ಬ್ಯಾಂಕಿಂಗ್ ಪದ್ಧತಿಯ ಜಾರಿಗೆ 2023 ರಲ್ಲಿಯೇ ಭಾರತೀಯ ಬ್ಯಾಂಕ್ ವ್ಯವಸ್ಥಾಪಕ ಮಂಡಳಿಗಳ ಒಕ್ಕೂಟ - ಐ ಬಿ ಎ ಒಪ್ಪಿಕೊಂಡಿದೆ. 2024 ರ ಮಾರ್ಚ್‌ ತಿಂಗಳಲ್ಲಿ ವೇತನ ಪರಿಷ್ಕರಣೆ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾನೂನಿಗೆ ಸೂಕ್ತ ತಿದ್ದುಪಡಿಗೆ ಶಿಫಾರಸು ಮಾಡಿ ಕೇಂದ್ರ ಸರಕಾರದ ಹಣಕಾಸು ಇಲಾಖೆಗೆ ಅನುಮೋದನೆಗೆ ಕಳಿಸಲಾಗಿದೆ. ಆದರೆ ಹಣಕಾಸು ಇಲಾಖೆಯಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಸರಕಾರದ ವಿಳಂಬ ಧೋರಣೆ ವಿರೋಧಿಸಿ 2025ರ ಮಾರ್ಚ್‌ ತಿಂಗಳಲ್ಲಿ ಎರಡು ದಿನದ ಮುಷ್ಕರ ಕರೆ ನೀಡಲಾಗಿತ್ತು .

                ಆಗ ಮಧ್ಯ ಪ್ರವೇಶಿಸಿದ ಕಾರ್ಮಿಕ ಇಲಾಖೆಯ ಆಯುಕ್ತರು ಸಂಧಾನದ ಮಾತುಕತೆ ನಡೆಸಿ ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿ ಮುಷ್ಕರ ಮುಂದೂಡಿಸಿದ್ದರು. ಇಷ್ಟು ಸುಧೀರ್ಘ ಸಮಯದ ಬಳಿಕವೂ ಸೂಕ್ತ ಫಲಿತಾಂಶ ಬಾರದ ಕಾರಣ ಮುಂದಿನ ದಿನಗಳಲ್ಲಿ ಸರಕಾರದ ನಡೆಯನ್ನು ಗಮನಿಸಿ ಮುಷ್ಕರಕ್ಕೂ ಸಿದ್ಧತೆಗಳನ್ನು ನಡೆಸಲಾಗಿದ್ದು ಬ್ಯಾಂಕ್ ಉದ್ಯೋಗಿಗಳ ಮುಷ್ಕರಕ್ಕೆ ಸರಕಾರವೇ ಕಾರಣ ಎಂದು ಆಪಾದಿಸಿದರು. ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯ ಪದಾಧಿಕಾರಿಗಳಾದ ಸನ್ನಿ ನಾಯಕ್, ಸಂದೀಪ ಹುಳಗೆ ಕರ್, ಸಮೀರ್ ಶೇಕ್, ಗಜಾನನ್ ನಾಯ್ಕ, ದೀಲೀಪ ಗುನಗಿ ಅಧಿಕಾರಿಗಳ ಸಂಘದ ಎನ್ ಆರ್ ಪ್ರಭು, ಭಾರತೀಯ ಸ್ಟೇಟ್ ಬ್ಯಾಂಕ್ ನ ಮಹೇಶ್, ಬೀನಾ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ