ಮಾತುಕತೆ ವಿಫಲವಾದರೆ, ಪ್ರತಿಭಟನೆ ಮತ್ತಷ್ಟು ತೀವ್ರ ರೈತ ನಾಯಕರ ಎಚ್ಚರಿಕೆ
ನವದೆಹಲಿ, ಜ 2 :ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆ ರದ್ದುಪಡಿಸಬೇಕೆಂಬ ರೈತರ ಬೇಡಿಕೆ ಕುರಿತು ನಾಳಿದ್ದು ನಡೆಯಲಿರುವ ಮಾತುಕತೆ ವಿಫಲವಾದರೆ ಟ್ರ್ಯಾಕ್ಟರ್ ರಾಲಿ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತ ನಾಯಕರು ತೀರ್ಮಾನಿಸಿದ್ದಾರೆ. ಇದೇ 4ರಂದು ಕೇಂದ್ರದ ಜೊತೆ ನಡೆಯಲಿರುವ ಮಾತುಕತೆ ವಿಫಲಗೊಂಡರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಹೇಳಿವೆ. ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ರೈತ ಸಂಘಟನೆ ಶುಕ್ರವಾರ(ಜ.1) ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರನ್ನು ಭೇಟಿಯಾಗಿ ಒಂದು ವೇಳೆ ಕೇಂದ್ರ ಸರ್ಕಾರದ ಜತೆಗಿನ ಮಾತುಕತೆ ವಿಫಲಗೊಂಡರೆ ಇದೇ 6ರಂದು ಕುಂಡ್ಲಿ ಮನೇಸರ್ ಪಾಲ್ವಾಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಮಾತುಕತೆ ನಂತರ ಪ್ರಕಟಣೆ ನೀಡಿರುವ ಸಂಘಟನೆ, 6ನೇ ಸುತ್ತಿನ ಮಾತುಕತೆಯಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ದೆಹಲಿಗೆ ತೆರಳುವ ಶಹಜಹಾನ್ ಪುರ್ ಗಡಿಯನ್ನು ಬಂದ್ ಮಾಡಿ, ಇದೇ 6ರಿಂದ 20ರವರೆಗೂ ದೇಶ್ ಜಾಗೃತಿ ಅಭಿಯಾನ ನಡೆಸುವುದಾಗಿ ತಿಳಿಸಿದೆ.