ಅಂಗವಿಕಲಾದವರು 10 ವರ್ಷಗಳಿಗೂ ಮುಂಚೆ ನಿವೃತ್ತಿಯಾದರೂ ಪಿಂಚಣಿ ಸೌಲಭ್ಯ: ಜಿತೇಂದ್ರ ಸಿಂಗ್
ನವದೆಹಲಿ, ಜ 2 : ಕರ್ತವ್ಯದಲ್ಲಿದ್ದಾಗ ಅಂಗವಿಕಲರಾದರೆ ಅಥವಾ ದೈಹಿಕ ಅಸಮರ್ಥತೆ ಹೊಂದಿ 10 ವರ್ಷಗಳಿಗೂ ಮುಂಚೆಯೇ ನಿವೃತ್ತಿ ಹೊಂದಿದರೆ ಅಂತಹವರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಾರ್ವಜನಿಕ ಕುಂದು ಕೊರತೆ, ಪಿಂಚಣಿ ಸಚಿವ ಜಿತೇಂದ್ರ ಸಿಂಗ್, ಪಿಂಚಿಣಿ ಸೌಲಭ್ಯ ಪಡೆಯಲು ಕನಿಷ್ಠ ೧೦ ವರ್ಷಗಳು ಸೇವೆ ಸಲ್ಲಿಸಿರಬೇಕೆಂಬ ನಿಯಮವನ್ನು ಕೈಬಿಟ್ಟಿದೆ. ದೈಹಿಕ ಅಸಮರ್ಥತೆ ಮತ್ತು ದುರ್ಬಲತೆಯಿಂದಾಗಿ ೧೦ ವರ್ಷಗಳ ಕನಿಷ್ಠ ಸೇವೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಸಹ ಇಂತಹ ನೌಕರ ಕೊನೆಯ ತಿಂಗಳು ಪಡೆದ ವೇತನದ ಶೇಕಡ 50 ರಷ್ಟು ನಿವೃತ್ತಿ ವೇತನ ಪಡೆಯಲು ಅರ್ಹರಾಗಿರುತ್ತಾರೆ ಎಂದರು. ಕರ್ತವ್ಯದಲ್ಲಿದ್ದಾಗ ಅಂಗವಿಕಲರಾದರೆ ಅಥವಾ ಅಂಗವೈಕಲ್ಯದ ನಡುವೆಯೂ ಸೇವೆಯಲ್ಲಿ ಉಳಿದುಕೊಂಡಿರುವವರಿಗೆ ಕೇಂದ್ರ ಸರ್ಕಾರ ಅಂಗವೈಕಲ್ಯ ಪರಿಹಾರ ವಿಸ್ತರಿಸಲು ತೀರ್ಮಾನಿಸಿದೆ. ಸರ್ಕಾರದ ಈ ತೀರ್ಮಾನದಿಂದ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್ನಂತಹ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.