‘ಚೌಕಾಬಾರ’ ಪೋಸ್ಟರ್ ಬಿಡುಗಡೆಗೊಳಿಸಿದ ಪವರ್ ಸ್ಟಾರ್
ಬೆಂಗಳೂರು, ಫೆ 06 : ರಘು ಭಟ್ ಅವರ ಶ್ರೀ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ನವ ನಿರ್ಮಿತಿ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ‘ಚೌಕಾಬಾರ’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ವಿಕ್ರಂ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಅವರ ಪತ್ನಿ ನಮಿತ ರಾವ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ ನ ರಘು ಭಟ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ನಿರ್ಮಾಣದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಮಿತಾ ರಾವ್ ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಸಾಹಸಕ್ಕೆ ವಿಕ್ರಂ ಮತ್ತು ನಮಿತಾ ಕೈ ಹಾಕಿದ್ದಾರೆ. ಅವರಿಬ್ಬರಿಗೂ ಒಳ್ಳೆಯದಾಗಲಿ ಎಂದು ಪುನೀತ್ ಹಾರೈಸಿದ್ದಾರೆ.
ನಟ ಮತ್ತು ನಿರ್ದೇಶಕ ವಿಕ್ರಂ ಸೂರಿ ಮಾತನಾಡಿ, ಇದೊಂದು ಕಾದಂಬರಿ ಆಧರಿತ ಸಿನಿಮಾ. ಮಣಿ ಆರ್ ರಾವ್ ಅವರು ಈ ಕಾದಂಬರಿ ಬರೆದಿದ್ದಾರೆ. ಪ್ರೀತಿ, ಸ್ನೇಹ ಮತ್ತು ಸಂಬಂಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗಲಿದೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಇತ್ತು. ಆದರೆ, ಕೊರೋನಾದಿಂದಾಗಿ ಆಗಲಿಲ್ಲ. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿದ್ದೇವೆ ಎಂದರು. ವಿಕ್ರಂ ಅವರ ಮಾತಿಗೆ ದನಿ ಗೂಡಿಸಿದ ನಮಿತಾ, ಮಾರ್ಚ್ ವೇಳೆಗೆ ಆಡಿಯೋ ಬಿಡುಗಡೆ ಮೂಲಕ ಆಗಮಿಸಲಿದ್ದೇವೆ ಎಂದಿದ್ದಾರೆ.
ಚಿತ್ರದಲ್ಲಿನ ಹಾಡುಗಳಿಗೆ ಎಚ್ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್ ಲಕ್ಷ್ಮಣ್ರಾವ್, ವಿಕ್ರಂ ಸೂರಿ, ಹರೀಶ್ ಭಟ್, ಅಲೋಕ್ ಸಾಹಿತ್ಯ ಬರೆದಿದ್ದಾರೆ. ಆ ಹಾಡುಗಳನ್ನು ಬೆಂಗಳೂರು, ಕಾರವಾರ, ದಾಂಡೇಲಿ, ಮೈಸೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ವಿಹಾನ್ ಪ್ರಭಂಜನ್, ನಮಿತಾ ರಾವ್, ಕಾವ್ಯಾ ರಮೇಶ್, ಸುಜಯ್ ಗೌಡ, ಸಂಜಯ್ ಸೂರಿ, ಸುಮಾ ರಾವ್, ಡಾ. ಸೀತಾ ಕೋಟೆ, ಕೀರ್ತಿ ಬಾನು, ಮಧೂ ಹೆಗಡೆ, ಶಶಿಧರ್ ಕೋಟೆ, ಪ್ರಥಮಾ ಪ್ರಸಾದ್. ದಮಯಂತಿ ನಾಗರಾಜ್, ಆ್ಯಡಮ್ ಪಾಷಾ, ಪ್ರದೀಪ್, ಕಿರಣ್ ವಟಿ ಸೇರಿ ಹಲವು ಕಲಾವಿದರು ನಟಿಸಿದ್ದಾರೆ.ನಟಿ ರೂಪಾ ಪ್ರಭಾಕರ್ ಸಂಭಾಷಣೆ, ಅಶ್ವಿನ್ ಕುಮಾರ್ ಸಂಗೀತ, ರವಿರಾಜ್ ಹೊಂಬಳ ಛಾಯಾಗ್ರಹಣ, ಶಶಿಧರ್ ಸಂಕಲನ ಮಾಡಿದ್ದಾರೆ. ಚೈತ್ರಾ, ವ್ಯಾಸರಾಜ್ ಸೋಸಲೆ, ನಕುಲ್ ಅಭಯಂಕರ್, ರಮ್ಯ ಭಟ್, ಸಿದ್ಧಾರ್ಥ್ ಬೆಳಮನ್ನು ಹಾಡಿಗೆ ದನಿಯಾಗಿದ್ದಾರೆ. ಮದನ್, ಹರಿಣಿ ಮತ್ತು ಸುಚಿನ್ ನೃತ್ಯ ಸಂಯೋಜಿಸಿದ್ದಾರೆ. ಹರೀಶ್ ಭಟ್ ಸಹ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.