ಮನರಂಜನೆ

“ನೀನು ದೇವರ ಮನೆಗೆ ಹೋಗಿ ಒಂದು ವರ್ಷ” ಚಿರು ನೆನೆದು ಭಾವುಕ ಪತ್ರ ಬರೆದ ಸರ್ಜಾ ಕುಟುಂಬ

“ನೀನು ದೇವರ ಮನೆಗೆ ಹೋಗಿ ಒಂದು ವರ್ಷ” ಚಿರು ನೆನೆದು ಭಾವುಕ ಪತ್ರ ಬರೆದ ಸರ್ಜಾ ಕುಟುಂಬ

ಬೆಂಗಳೂರು, ಜೂನ್ 07:ನಟ ಚಿರಂಜೀವಿ ಸರ್ಜಾ ವಿಧಿವಶರಾಗಿ ಒಂದು ವರ್ಷ ಕಳೆದಿದೆ.  ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಭಾವನಾತ್ಮಕ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ ಎಂದು ಬರೆದುಕೊಂಡಿದ್ದಾರೆ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದಿಗೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ..' ಎಂದು ಇಡೀ ಕುಟುಂಬ ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಪತ್ನಿ ಮೇಘನಾ ರಾಜ್ ಪತಿ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿರು ಫೋಟೋ ಶೇರ್ ಮಾಡಿ ಸ್ಮರಿಸುತ್ತಿದ್ದಾರೆ ಜೂನ್ 7, 2020 ಮಧ್ಯಾಹ್ನ ಸುಮಾರು 4 ಗಂಟೆಗೆ ಚಿರಂಜೀವಿ ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರಪ್ರಿಯರಿಗೆ ಬರ ಸಿಡಿಲಿನಂತೆ ಬಡಿದಿತ್ತು.  ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಮನೆಯಲ್ಲಿ ಕುಸಿದು ಬಿದ್ದ ಚಿರಂಜೀವಿ ಸರ್ಜಾ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಕೆಲವೇ ಕ್ಷಣದಲ್ಲಿ ಚಿರು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಚಿರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಕುಟುಂಬದವರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.   ಚಿರು ಪುತ್ರನ ನಗುವಿನಿಂದ ನಿಧಾನವಾಗಿ  ಆಘಾತದಿಂದ ಹೊರಬರಲು ಯತ್ನಿಸುತ್ತಿದ್ದಾರೆ.



ಸುದ್ದಿ ಓದಿ