ಇರುವ ಭಾಗ್ಯವ ನೆನೆದು..
-ಡಾ| ವೈ.ಎಂ.ಯಾಕೊಳ್ಳಿ , ಬೆಳಗಾವಿ
ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆ ನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ
ನರಳುವದು ಬದುಕೇನೋ ಮಂಕುತಿಮ್ಮ
ಬದುಕಿನ ಅರ್ಥವನ್ನು ಕವಿ ಡಿ.ವಿ.ಜಿ ಇಲ್ಲಿ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಬರೀ ಇಲ್ಲವೆನ್ನವುದರಲ್ಲಿಯೇ ಬದುಕು ಕಳೆದುಕೊಳ್ಳುವವರು ನಾವು. ಇಲ್ಲದಿರುವದನ್ನು ನೆನೆದು ಇರುವ ಸುಖವನ್ನು ಮರೆಯುವದು ಅಂಥಹ ಜಾನತನವೇನಲ್ಲ. ದೊರಕಿದದುಷ್ಟರಲ್ಲಿಯೇ ಸಂತೋಷ ಕಾಣುವದು ಜಾಣತನದ ದಾರಿ ಎಂದು ಇಲ್ಲಿ ಕವಿವಾಣಿ ನಮ್ಮನ್ನು ಎಚ್ಚರಿಸುತ್ತಿದೆ. ಮಾಯ್ದ ಗಾಯವನ್ನು ಕೆರೆ ಕೆರೆದು ಅದನ್ನು ಹೊಸ ಗಾಯವನ್ನಾಗಿಸುವವನಂತೆ, ಅಸೂಯೆ ಪಡುವವರ ಬದುಕೂ ಅಷ್ಟೇ ಎಂಬ ಅರ್ಥವನ್ನು ಇಲ್ಲಿ ಕಾಣಬಹುದು. ಇನ್ನೊಂದೆಡೆ ಅವರೇ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು' ಎಂದು ಎಚ್ಚರಿಸಿದ್ದೂ ಉಂಟು.
ಎಂದೊ ತರಚಿ ಅದ ಗಾಯವೊಂದನ್ನು ಮತ್ತೆ ಮತ್ತೆ ಕೆದರಿ ಅದನ್ನು ಹುಣ್ಣು ಮಾಡಿಕೊಳ್ಳುವದು ಮಂಗನ ಪ್ರವೃತ್ತಿ. ನಾವೂ ಹಾಗೆಯೇ ವತರ್ಿಸುತ್ತೇವೆ. ಎಂದೋ ಒಮ್ಮೆ ಆದ ನೋವಿನ ಸಂಗತಿಯನ್ನು ಇಂದು ಮತ್ತೆ ಮತ್ತೆ ನೆನಪಿಸಿ ಅದೇ ನೋವಿನಲ್ಲಿಯೆ ಅಳುತ್ತ ಕೂಡುತ್ತೇವೆ. ಇದು ಅರ್ಥಹೀನ. ತನಗಿರುವ ಕೊರತೆಯನ್ನೆ ದೊಡ್ಡದು ಮಾಡಿ ಇರುವ ಅನಂದವನ್ನು ಕಳೆದುಕೊಳ್ಳುವ ಮನುಷ್ಯ ಸ್ವಭಾವವನ್ನು ಮಂಗನಿಗೆ ಹೋಲಿಸುತ್ತಾರೆ ಕವಿ.
ಎಷ್ಟು ಗಳಿಸಿದರೆ ನಮಗೆ ಸಾಲಬಹುದು? ಬಹುಶಃ ನಮ್ಮ ಈ ಪ್ರಶ್ನೆಗೆ ಉತ್ತರವೇ ಇಲ್ಲ. ಇಷ್ಟು ದೊರಕಿದರೆ ಮತ್ತಷ್ಟರಾಸೆ ಎಂಬ ಮತೂ ಸುಳ್ಳಲ್ಲ. ಎಷ್ಟು ಗಳಿಸಿದರೂ ಕೊನೆಗೆ ನಾವು ತಿನ್ನುವದು ಹಿಡಿಯನ್ನವಷ್ಟೇ. ಅದಕ್ಕೆ ಜಗತ್ತನ್ನೆಲ್ಲ ಗೆದ್ದ ಚಕ್ರವತರ್ಿ ಅಲೆಕ್ಸಾಂಡರ್ ತಾನು ಸತ್ತು ತನ್ನ ಶವವನ್ನು ಸಾಗಿಸುವಾಗಿ ಸಾರ್ವಜನಿಕರಿಗೆ ಕಾಣುವಂತೆ ನನ್ನ ಕೈಗಳನ್ನು ಹೊರಗೆ ಇರಿಸಿ. ನನ್ನ ಬರಿಗೈಯನ್ನು ನೋಡಿದ ಜನ "ಜಗತ್ತನ್ನೇ ಗೆದ್ದ ಮಹಾನ್ ದೊರೆ ಕೂಡ ಹೋಗುವಾಗ ಬರಿಗೈಯಿಂದಲೆ ಹೋಗುತ್ತಿದ್ದಾನೆ" ಎಂದು ಅರ್ಥಮಾಡಿಕೊಳ್ಳಲಿ ಎಂದು ಹೇಳಿದ್ದನಂತೆ. ಅದಕ್ಕೆ ದಾಸರು
ಹೋಗುತೇನೂ ಒಯ್ಯಲಿಲ್ಲ ಬರುವಾಗೇನೂ ತಂದೇ ಇಲ್ಲ ಸುಟ್ಟ ಸುಣ್ಣದರಳಿನಾಂಗೆ ನಡುವೆ ಈ ಬಾಳುವೆ
ಎಂದಿದ್ದರು. ಬದುಕಿನುದ್ದ ಗಳಿಸುತ್ತಲೇ ಹೋಗುತ್ತೇವೆ. ಹಾಗಾದರೆ ಗಳಿಸಿದ್ದನ್ನು ಅನುಭವಿಸುವದು ಯಾವಾಗ? ಇದಕ್ಕೆ ಉತ್ತರ ಕಾಣಬೇಕಾದವರು ನಾವೇ. ಇದು ನಮ್ಮ ಬದುಕು. ಇಲ್ಲಿನ ಆನಂದ, ದುಃಖ, ನಮ್ಮ ಹೊಣೆಗಾರಿಕೆ. ಏನೂ ಇಲ್ಲವೆಂದು ಕೊರಗುತ್ತ ಕುಳಿತರೆ ಏನೂ ಇಲ್ಲವೇ ಇಲ್ಲ. ಇರುವದರಲ್ಲಿಯೇ ಎಲ್ಲವೂ ಇದೆ ಎಂಬ ಭಾವ ತಾಳಿದರೆ ಎಲ್ಲವೂ ಇರುತ್ತದೆ. ದಿನಕ್ಕೆ ನೂರರಷ್ಟು ಕೂಲಿ ಗಳಿಸುವ ಕೂಲಿಯೊಬ್ಬ ದಿನದ ಮುಕ್ತಾಯಕ್ಕೆ ತನ್ನ ಮನೆಗೆ ಹೋಗಿ ತಾನು ತಂದುದರಲ್ಲಿಯೇ ಮಡದಿ ಮ್ಕಕಳ ಜೊತೆ ಅನಂದವಾಗಿ ಬದುಕುತ್ತಾನೆ. ಅವನಿಗೆ ರಾತ್ರಿಯೆಲ್ಲ ನೆಮ್ಮದಿಯ ನಿದ್ದೆ. ಮರುದಿನ ಎದ್ದೊಡನೆ ಮತ್ತೆ ತನ್ನ ಕೆಲಸಕ್ಕೆ ಹೋಗಬೇಕು. ಯಾವ ಐ.ಟಿ ವಿಭಾಗದವರೂ ಬಂದು ರೈಡ್ ಮಾಡಿಯಾರೆಂಬ ಆತಂಕವಿಲ್ಲ. ಲಕ್ಷ ಲಕ್ಷ ಕೋಟಿ ಗಳಿಸಿದ ನಮ್ಮ ಅತ್ಯಾಧುನಿಕ ಶ್ರೀಮಂತರಿಗೆ ಮಲಗಿದರೆ ಹಾಸಿಗೆಯಲ್ಲಿ ನಿದ್ದೆ ಬಾರದು. ಹೊತ್ತಿಗೆ ಸರಿಯಾಗಿ ಹೊಟ್ಟೆ ಹಸಿಯದು. ಇದೇಕೆ ಹೀಗೆ? ಅದೇ ಬದುಕಿನ ವೈಚಿತ್ರ್ಯ.
ನಮ್ಮ ಹಿಂದಿನ ಹಿರಿಯರಿಗೆ ಕಾರಿರಲಿಲ್ಲ. ಮೋಬೈಲಿರಲಿಲ್ಲ, ಇಂದಿನ ಇಂಟನರ್ೆಟ್, ವೈ ಫೈ ಸೌಲಭ್ಯವಿರಲಿಲ್ಲ. ಇನ್ನೊಂದು ಊರಿಗೆ ಹೋಗಲು ಕನಿಷ್ಠ ಪಕ್ಷ ಒಂದು ವಾಹನ ವ್ಯವಸ್ಥೆಯೂ ಇರಲಿಲ್ಲ. ಆದರೂ ಅವರ ಬದುಕು ನೆಮ್ಮದಿ ಯಿಂದ ಇದ್ದಿತು. ಅವರು ಇರುವಷ್ಟರಲ್ಲಿಯೇ ಸಮಾಧಾನ ತಾಳಿದ್ದರು. ಕೇವಲ ನನಗಷ್ಟೇ ಎನ್ನುವ ಸ್ವಾರ್ಥವಿಲ್ಲದ್ದರಿಂದ ಅವರು ಸಂತೋಷವಾಗಿದ್ದರು. ಹಳ್ಳಿಗಳಲ್ಲಿ ಮೂವತ್ತು ನಲವತ್ತು ಜನರ ಕೂಡು ಕುಟುಂಬ ಒಂದೆಡೆ ಆನಂದದಿಂದ ಬದುಕಿದ್ದರು. ಇಂದು ನಾವು ನನಗೊಂದು, ಮಡದಿಗೊಂದು, ಮಕ್ಕಳಿಗೆ ಬೇರೆ ಮನೆ, ಕಾರು ಹೊಂದಿದ್ದರೂ ಅವರ ಬದುಕಿನ ಆನಂದ ನಮಗೆ ದೊರಕುತ್ತಿಲ್ಲ. ಅಂದರೆ ಸುಖ, ಸಂತೋಷ, ನೆಮ್ಮದಿಗಳು ಹಣ ಮತ್ತು ಐಷಾರಾಮಿ ವಸ್ತುಗಳಲ್ಲಿಲ್ಲ ಎಂಬ ಸತ್ಯವನ್ನು ನಾವು ಅರಿತಿಲ್ಲ.
ನಮಗೆ ಬಂದಿರುವ ದುರ್ಗತಿಗೆ ಸಾಮಾನ್ಯವಾಗಿ ನಾವು ದೂರುವದು ಇತರರನ್ನೇ. ನಾವೇ ಕೈಯಾರೆ ಮಾಡಿಕೊಂಡ ದುರ್ಗತಿ ಇದು ಎಂಬ ಅರಿವು ನಮಗಿರುವದಿಲ್ಲ. ಸದಾ ನಮ್ಮ ಈ ದುಸ್ಥಿತಿಗೆ ಬೇರೆಯವರೇ ಕಾರಣ ಎಂದು ಅವರಿವರ ದೂಷಿಸುವದರಲ್ಲಿಯೇ ದಿನ ಕಳೆದು ಹೋಗುತ್ತದೆ. 'ಜಗತ್ತನ್ನು ದ್ವೇಷಿಸುತ್ತ ಕೂಡ್ರಲು ಬದುಕು ದೀರ್ಘವಾಗಿದೆಯೆಂದು ನಾನು ಬಯಸುವದಿಲ'್ಲ ಎಂದು ಹೇಳಿದ್ದ ಚಿಂತಕರ ಮಾತು ನಮಗೆ ಅರಿವಾಗುವದೇ ಇಲ್ಲ. ಬರೀ ದೂಷಣೆಯಲ್ಲಿಯೇ ಜೀವನ ಮುಗಿಸಿ ಬಿಡುತ್ತೇವೆ. ಇದನ್ನು ಕವಿ 'ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವದು ಬದುಕೇನೋ?' ಎಂದು ಪ್ರಶ್ನಿಸುತ್ತಾನೆ. ನಾವು ಅವರಿವರನ್ನು ದೂಷಿಸುವದು ಯಾಕೆ? ಅದರಿಂದ ನಮಗೂ ತೊಂದರೆ. ಇತರರಿಗೂ ತೊಂದರೆ. ನರಕವೆಂದರೆ ಇನ್ನೇನು? ಸಮಾಧಾನವಿಲ್ಲದ ಬದುಕೇ ನರಕ. ಉಳಿದವರನ್ನು ದೂಷಿಸುವದರಿಂದ ನಮ್ಮ ಮನಸನ್ನು ನರಕವಾಗಿಸುತ್ತೇವೆ, ಇತರರ ಬದುಕನ್ನು ನರಕವಾಗಿಸುತ್ತೇವೆ ಅಲ್ಲವೇ?
ಮನಸ್ಸು ತನ್ನ ಒಳಗಿನ ನೋವಿಗೆ ಅಸಮಾಧಾನ ಪಡುವದಕ್ಕಿಂತ ಇತರರ ಸಾಧನೆ ಕಂಡೆ ವ್ಯಗ್ರವಾಗುವದು ಅಧಿಕ. ಅವರಿವರ ಸಾಧನೆ , ಬೆಳವಣಿಗೆ ಕಂಡರೆ ನಮ್ಮ ಮನಸ್ಸು ಕಿರಿಕಿರಿ ಅನುಭವಿಸುತ್ತದೆ. ಒಂದು ಕಾಲವಿತ್ತು 30-40 ವರ್ಷಗಳ ಹಿಂದೆ ಹಳ್ಳಿಯ ಒಬ್ಬ ಹುಡುಗ ಪರೀಕ್ಷೆಯಲ್ಲಿ ಪ್ರಥಮ ಬಂದರೆ, ಹೆಚ್ಚಿನ ಅಂಕ ಗಳಿಸಿದರೆ, ಊರೆಲ್ಲ ಸಿಹಿ ಹಂಚುತ್ತಿದ್ದರು. ಒಬ್ಬ ಹುಡುಗ ಪದಕ ಗೆದ್ದು ಬಂದರೆ ತಮ್ಮ ಮನೆಯ ಮಗನೇ ಗೆದ್ದು ಬಂದಷ್ಟೇ ಸಂಭ್ರಮಿಸುತ್ತಿದ್ದರು. ಆದರೆ ಈಗ ಆ ನೆಮ್ಮದಿ, ಸಮಾಧಾನ, ಉದಾರತೆ ನಮ್ಮಲ್ಲಿ ಕಾಣಿಸುತ್ತಿಲ್ಲ. ಪಕ್ಕದ ಮನೆಯ ಹುಡುಗ ರ್ಯಾಂಕ್ ಬಂದರೆ ನಮ್ಮ ಮಗ ಬರಲಿಲ್ಲವಲ್ಲ ಎಂದು ಕರುಬುವದೇ ಅಧಿಕ. ಅವರಿವರ ಕಡೆ ನೋಡುತ್ತ ನಾವು ನಮ್ಮ ಹತ್ತಿರ ಇರುವದರ ಕಡೆಗೆ ಗಮನ ಕೊಡದೆ ಸಂತಸ ಕಳೆದು ಕೊಳ್ಳುವದೇ ಹೆಚ್ಚು. ನಮ್ಮ ಮನೆಯಲ್ಲಿರುವ ಸಾದಾ ಕಾರನ್ನು ಶ್ರೀಮಂತರ ಅತ್ಯಾಧುನಿಕ ಐಷಾರಾಮಿ ಕಾರಿಗೆ ಹೋಲಿಸಿ ಅಸೂಯೆ ಪಡುವಾಗ ಕಿಲೋಮೀಟರ್ಗಟ್ಟಲೇ ಕಾಲ್ನಡಿಗೆಯಲ್ಲಿಯೆ ನಡೆಯುವ, ಒಂದು ದ್ವಿಚಕ್ರವಾಹನವೂ ಇಲ್ಲದ ಬಡವನ ನೆನಪಾಗುವದೇ ಇಲ್ಲ.
ಮನಸ್ಸು ನೆಮ್ಮದಿ ಕಳೆದುಕೊಳ್ಳಲು ಇನ್ನೂ ಒಂದು ಕಾರಣವಿದೆ. ಹಿಂದಿನ ದ್ವೇಷಗಳನ್ನು ಆಗಾಗ ನೆನಪಿಸಿ ಕೋಪ ಗೊಳ್ಳುವದು. ಬರೀ ದ್ವೇಷವನ್ನು ನೆನಪಿಸುತ್ತ ಕುಳಿತರೆ ಶಾಂತಿಗೆಲ್ಲಿದೆ ದಾರಿ? ಪ್ರತಿ ದಿನವೂ ಹೊಸದಿನ. ಅಂದಂದಿನ ದ್ವೇಷವನ್ನು ಅಂದದಂದಿನ ನೋವನ್ನು ಅಂದಿಗೆ ಮರೆತು ಹೊಸದಾಗಿ ಬದುಕಬೇಕು ಎನ್ನವುದನ್ನೇ ಮರೆತ ನಾವು ಜೀವನವಿಡೀ ದ್ವೇಷ ಸಾಧಿಸುತ್ತ ಹೋಗುತ್ತೇವೆ.
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಹೋದರೆ
ಅಮೃತದ ಸವಿ ಇದೆ ನಾಲಗೆಗೆ
ಎಂದು ಕವಿ ಕಂಡುಕೊಂಡ ಉತ್ತರ ನಮಗೆ ಬರಿ ಓದಿನ ಸಾಲಾಗಿ ಬಿಟ್ಟಿರುತ್ತದೆ. ಅದು ಬಾಳಿನ ಪಥವಾಗದ ಹೊರತು ನಮ್ಮ ಓದಿಗೆ, ತಿಳುವಳಿಕೆಗೆ ಅರ್ಥವಿಲ್ಲ. ನಮ್ಮ ನೆಮ್ಮದಿಯ ನಾವು ಕಾಣುವದೊಂದೆ ದಾರಿ.
ಇದಕ್ಕೆಲ್ಲ ಉತ್ತರ ಯಾವ ಪುಸ್ತಕದಲ್ಲಿಯೂ ಇಲ್ಲ, ಯಾವ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿಯೂ ಇಲ್ಲ. ನಮ್ಮೊಳಗೇ ಇದೆ. ಅದನ್ನು ನಾವು ಹುಡುಕಿಕೊಳ್ಳಬೇಕಷ್ಟೇ.