ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ
ಬ್ಯಾಡಗಿ: ತಾಲೂಕಿನ ಹೆಡಿಗೊಂಡ ಗ್ರಾಮದ ಹೊರವಲಯದಲ್ಲಿ ಕಬ್ಬಿನ ಬೆಳೆಗೆ ಶಾರ್ಟ್ ಸರ್ಕ್ಯೂಟ್ನಿಂದಗಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಗಳ ಹಾನಿ ಸಂಭವಿಸಿದೆ.ಅಂದಾಜು 50ಲಕ್ಷಕ್ಕೂ ಹೆಚ್ಚು ಮೌಲ್ಯದ 24ಎಕರೆಯಲ್ಲಿ ಫಲವತ್ತಾಗಿ ಬೆಳೆದಿದ್ದ ಸುಮಾರು 150 ಕ್ವಿಂಟಾಲ್ನಷ್ಟು ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ. ಇಂಗಳಗೊಂದಿ ಗ್ರಾಮದ ರಿ.ಸ.ನಂಬರಗಳಲ್ಲಿರುವ ಹೆಡಿಗೊಂಡ ಗ್ರಾಮದ ಕರಿಯಪ್ಪ ತಿರಕಪ್ಪ ಬಿಳಿಯಣ್ಣನವರ ಅವರಿಗೆ ಸೇರಿದ 14 ಎಕರೆ 10ಗುಂಟೆ, ದ್ಯಾಮಪ್ಪ ತಿರಕಪ್ಪ ಬಿಳಿಯಣ್ಣನವರ ಅವರಿಗೆ ಸೇರಿದ 1ಎಕರೆ 4ಗುಂಟೆ, ಹಾಗೂ ಸಿದ್ದಲಿಂಗಪ್ಪ ದೊಡ್ಡ ಚನಬಸಪ್ಪ ಬಿಳಿಯಣ್ಣನವರ ಅವರಿಗೆ ಸೇರಿದ 8ಎಕರೆ 15ಗುಂಟೆ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡುವ ಮುನ್ನವೇ ಅಗ್ನಿ ದುರಂತಕ್ಕೆ ಒಳಗಾಗಿ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ.ಕಬ್ಬು ಬೆಳೆದ ರೈತರು ಹೇಳುವಂತೆ ಈ ಬಾರಿ ನೀರಾವರಿ ಪ್ರದೇಶದಲ್ಲಿ ಉತ್ತಮವಾಗಿ ಬೆಳೆದಿದ್ದ ಕಬ್ಬು ಪ್ರತಿ ಎಕರೆಗೆ ಕನಿಷ್ಠ 70ಕ್ವಿಂಟಾಲ್ನಷ್ಟು ಇಳುವರಿಯೊಂದಿಗೆ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ ಆಕಸ್ಮಿಕ ಬೆಂಕಿ ದುರ್ಘಟನೆಯಿಂದ ತಾವು ಸಾಲದ ಹೊರೆಯೊಂದಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಇವರೊಂದಿಗೆ ಗ್ರಾಮಸ್ಥರು ಸಹ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ