ಸಂಚಾರ ರಂಗ ನಾಟಕ ಪ್ರದರ್ಶನ; ಕಾರ್ಯಾಧ್ಯಕ್ಷ ಸುಮಾ ವಿಜಯ್
ಸಂಚಾರ ರಂಗ ನಾಟಕ ಪ್ರದರ್ಶನ; ಕಾರ್ಯಾಧ್ಯಕ್ಷ ಸುಮಾ ವಿಜಯ್
ಹೂವಿನಹಡಗಲಿ 10: ಎಂ.ಪಿ.ಪ್ರಕಾಶರ ರಂಗ ಭೂಮಿ ಚಟುವಟಿಕೆಗಳನ್ನು ಮುಂದುವರೆಸಿ ಕೊಂಡು ಹೋಗುವ ಕೆಲಸ ನಿರಂತರವಾಗಿ ನಡೆಸುವ ಸಂಕಲ್ಪ ನಮ್ಮದು ಎಂದು ರಂಗಭಾರತಿ ಕಾರ್ಯಾಧ್ಯಕ್ಷ ಸುಮಾ ವಿಜಯ್ ಹೇಳಿದರು.ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನೀಲಕಂಠೇಶ್ವರ ನಾಟ್ಯ ಸಂಘದ (ನೀನಾಸಂ)2024ನೇ ಸಾಲಿನ ತಿರುಗಾಟ ರಂಗ ನಾಟಕ ಪ್ರದರ್ಶ ನದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ನೀನಾಸಂ ತಿರುಗಾಟದ ರಂಗಪ್ರದರ್ಶನಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಲಾಗುತ್ತದೆ. ಹೂವಿನ ಹಡಗಲಿಯಲ್ಲಿ ಸಹ ರಂಗಭಾರತಿ ಸಹ ಯೋಗದಲ್ಲಿ ನಾಟಕ ಪ್ರದರ್ಶನ ಏರಿ್ಡಸಲಾಗುತ್ತದೆ ಎಂದು ಹೇಳಿದರು. ಭವಭೂತಿ ರಚನೆಯ ಮಾಲತೀ ಮಾಧವ ಕನ್ನಡ ರೂಪ ಹಾಗೂ ಅಕ್ಷರ ಕೆ.ವಿ.ನಿರ್ದೇಶನದಲ್ಲಿ ನೀನಾಸಂ ರಂಗಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಮಾಲತೀ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕೆ ಇರುವ ತೊಂದರೆಗಳನ್ನು ದಾಟಿ ಕೊನೆಗೂ ಮದುವೆ ಆಗುತ್ತಾರೆ. ಜತೆಗೆ ಇನ್ನೆರಡು ಜೋಡಿಗಳು ಒಂದಾಗಿ ಮದುವೆ ಆಗುವುದು ನಾಟಕದ ಮತ್ತೊಂದು ವೈಶಿಷ್ಟ್ಯ. ಪೈಪೋಟಿಗೆ ಬಿದ್ದವರಂತೆ ಆಂಗಿಕ ಅಭಿನಯ ಸಂಭಾಷಣೆ ಅದ್ಭುತ ನಟನೆ ಮೂಲಕ ಸಭಿಕರನ್ನು ರಂಜಿಸಿದರು. ಮಾಧವ, ಮಕರಂದ, ಮಾಲತೀ, ಮದಯಂತಿಕೆ, ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರ ಅಭಿನಯ ಉತ್ತಮವಾಗಿ ಮೂಡಿ ಬಂತು. ಸುದೀರ್ಘ ಸಂಭಾಷಣೆಯನ್ನು ಧ್ವನಿಯ ಏರಿಳಿತಗಳ ನಡುವೆ ಒಂದೇ ಉಸಿರಿನಲ್ಲಿ ಒಪ್ಪಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.ರಂಗಭಾರತಿ ಕಲಾವಿದ ಪಿ.ಎಂ.ಕೊಟ್ರಸ್ವಾಮಿ, ಮಂಜುನಾಥ ಪಾಟೀಲ್, ಜಯಣ್ಣ ನಿರ್ವಹಿಸಿದರು.