ತಾಳಿಕೋಟಿ

ದಿಢೀರನೆ ಕುಸಿದ ಸೇತುವೆ - ಸಂಚಾರ ಸ್ಥಗಿತ ಪ್ರಯಾಣಿಕರ ಗೋಳು ಕೇಳುವವರು ಯಾರು?

ದಿಢೀರನೆ ಕುಸಿದ ಸೇತುವೆ - ಸಂಚಾರ ಸ್ಥಗಿತ  ಪ್ರಯಾಣಿಕರ ಗೋಳು ಕೇಳುವವರು ಯಾರು?

ತಾಳಿಕೋಟಿ: ಹಡಗಿನಾಳ ಗ್ರಾಮ ಮಾರ್ಗದ ಸಂಪರ್ಕ ಕಲ್ಪಿಸುವ ಮೂಕಿಹಾಳ ಗ್ರಾಮದ ಹತ್ತಿರ ಸೋಗಲಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಕೆಳಮಟ್ಟದ ಸೇತುವೆ ನಿನ್ನೆ ದಿಢೀರನೆ ಕುಸಿದು ಬಿದ್ದಿರುವದರಿಂದ ಈ ಭಾಗದ ಗ್ರಾಮಗಳ ಸಂಪರ್ಕ ಕಡಿದುಹೋಗಿ ಪ್ರಯಾಣಿಕರು ಪರದಾಡುವಂಥಹ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಿಂದ  ವಿಜಯಪುರಕ್ಕೆ ಸಂಪರ್ಕ ನೀಡುವ ಡೋಣಿ ನದಿಯ ಮುಖ್ಯ ಸೇತುವೆ ಕುಸಿದು ವರ್ಷಗಳೇ ಕಳೆದಿದ್ದರೂ ಇಲ್ಲಿಯವರೆಗೆ ದುರಸ್ತಿಯಾಗಿಲ್ಲ. ತಾತ್ಕಾಲಿಕ ಕೆಳಸೇತುವೆ ರಸ್ತೆ ದುರಸ್ತಿ ಮಾಡಲಾಗಿದ್ದರೆ, ಅದು ಈಗ ಜಲಾವೃತಗೊಂಡು ಸಂಚಾರ ಸ್ಥಗಿತವಾಗಿದೆ. ಎರಡೂ ಮಾರ್ಗಗಳು ಸ್ಥಗಿತವಾಗಿವೆ. ಪ್ರಯಾಣಿಕರ ಸ್ಥಿತಿ ಏನಾಗಬಹುದು ಆ ಭಗವಂತನೆ ಬಲ್ಲ. ಜನಪ್ರತಿನಿಧಿಗಳಿಗೆ ಇದರ ಪರಿವೆಯೇ ಇಲ್ಲವೇನೊ ಎಂಬಂತಾಗಿದೆ.

ಪಟ್ಟಣದಿಂದ ಪ್ರತಿನಿತ್ಯ ಎರಡೂ ಮಾರ್ಗಗಳಿಂದ ಸಾವಿರಾರು ಜನರು ತಮ್ಮ ದೈನಂದಿನ ಅಗತ್ಯ ಕಾರ್ಯಗಳಿಗೆ ಬೇರೆ ಸ್ಥಳಗಳಿಗೆ ಹೋಗಬೇಕು. ಈಗ ಎರಡೂ ಮಾರ್ಗಗಳು ಸ್ಥಗಿತಗೊಂಡಿರುವದರಿಂದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಆರೋಗ್ಯದ ಗಂಭೀರ ಸಮಸ್ಯೆ ಇರುವ ರೋಗಿಗಳನ್ನು, ಗರ್ಭಿಣಿ ಮಹಿಳೆಯರನ್ನು ಇಲ್ಲಿಯ ಆಸ್ಪತ್ರೆಗೆ ತರಬೇಕು. ಅದು ಈಗ ಕಷ್ಟದ ಕೆಲಸ. ಸರ್ಕಾರಿ  ಸೇವೆಯನ್ನು ಸಲ್ಲಿಸುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಎಲ್ಲರಿಗೂ  ಇದು ತೀವ್ರ ತೊಂದರೆಯನ್ನು ನೀಡುವ ಗಂಭೀರ ಸಮಸ್ಯೆಯಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ನಮ್ಮ ಜನಪ್ರತಿನಿಧಿಗಳು ಆದಷ್ಟು ಬೇಗ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಕಳಪೆ ಕಾಮಗಾರಿಗಳು ಎಂಥಹ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುವದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೆ ಇಲ್ಲ ಎಂದು ಹೇಳಬಹುದಾಗಿದೆ 

ಸುದ್ದಿ ಓದಿ