ಧಾರವಾಡ - ಹುಬ್ಬಳ್ಳಿ

ಮಳೆ ಅವಘಡಕ್ಕೆ 80% ಬೆಳೆ ಹಾನಿ

ಮಳೆ ಅವಘಡಕ್ಕೆ 80% ಬೆಳೆ ಹಾನಿ

          ಧಾರವಾಡ 24:  ಜಿಲ್ಲೆಯಲ್ಲಿ ರೈತರು ಮುಂಗಾರು ಮಳೆಯಾಶ್ರಿತ ಬೆಳೆಗಳಾದ ಶೇಂಗಾ, ಹೆಸರು, ಉದ್ದು, ಸೋಯಾಬಿನ್, ಭತ್ತ, ಹತ್ತಿ, ಕಬ್ಬು ಇತ್ಯಾದಿ ಶೇ 80 ರಷ್ಟು ಬಿತ್ತನೆ ಮಾಡಿದ್ದಾರೆ. ಆದರೆ ಮುಂಗಾರು ಮಳೆ ಕೊರತೆಯಿಂದ ಹುಟ್ಟಿದ ಬೆಳೆಗಳು ಒಣಗುತ್ತಿದ್ದು,  ಬರಗಾಲ ಆವರಿಸಿಂತಾಗಿದೆ. ಇದರಿಂದ ತುಟ್ಟಿ ಗೊಬ್ಬರ, ಬೀಜ, ಬಿತ್ತನೆಯ ಖರ್ಚುವೆಚ್ಚ ಎಲ್ಲವೂ ರೈತನಿಗೆ ಹೊರೆಯಾಗುತ್ತಿದೆ. ಒಂದೊಮ್ಮೆ ಬೆಳೆ ಸರಿಯಾಗಿ ಬಂದರೂ ಬೆಳೆದ ಬೆಲೆಗೆ ಸರಿಯಾದ ಬೆಂಬಲ ಬೆಲೆ ಸಿಗದೆ, ನಿರಂತರವಾಗಿ ಆತಂಕದ ಪರಿಸ್ಥಿತಿಯಲ್ಲಿ ಇರುತ್ತಾನೆ. 

ದೇಶಕ್ಕೆ ಅನ್ನ ನೀಡುವ ರೈತನಿಗೆ ಮೇಲಿಂದ ಮೇಲೆ ಈ ರೀತಿ ಹೊಡೆತ ಬಿದ್ದರೆ ರೈತ ಬದುಕುವುದು ಹೇಗೆ?  ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ಖರ್ಚುವೆಚ್ಚ ನಿಭಾಯಿಸಲು ಹೆಣಗಾಡಿ ಸಾಲದ ಶೂಲಕ್ಕೆ ಸಿಗುವಂತಾಗುತ್ತದೆ. 

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆ ಸರಿಪಡಿಸಲು ತುರ್ತಾಗಿ ವಿಶೇಷ ತಂಡ ರಚಿಸಿ ಸಮಿಕ್ಷೆ ಮಾಡಿಸಿ, ಪ್ರತಿ ಹೆಕ್ಟೇರಿಗೆ ರೂ. 50 ಸಾವಿರ ಸಹಾಯ ಧನದೊಂದಿಗೆ ವಿಶೇಷ ಪ್ಯಾಕೇಜನ್ನು ಘೋಷಿಸಿ, ರೈತನ ಆಶ್ರಯಕ್ಕೆ ನಿಲ್ಲಬೇಕು. ಬ್ಯಾಂಕುಗಳಲ್ಲಿ ಬೆಳೆ ಸಾಲ ಕೊಡಲು ಯಾವುದೇ ಮಾನದಂಡವನ್ನು (ಸಿಬಿಲ್) ಪರೀಶೀಲಿಸದೆ ಸಾಲವನ್ನು ಕೊಡಲು ಬ್ಯಾಂಕುಗಳಿಗೆ ಕೂಡಲೇ ನಿರ್ದೇಶಿಸಿ, ಜಿಲ್ಲೆಯ ರೈತ ಮುಖಂಡರಗಳ ಸಭೆಯನ್ನು ಕರೆದು ಚರ್ಚಿಸಿ ಸೂಕ್ತ ಕ್ರಮಕೈಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಬೇಕೆಂದು ಸಮಸ್ತ ರೈತರ ಪರವಾಗಿ ಜನತಾದಳ (ಸಂಯುಕ್ತ) ಧಾರವಾಡ ಜಿಲ್ಲಾ ಘಟಕದ ಪರವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ, ರೈತರಾದ ವೆಂಕರಡ್ಡಿ ತಿರ್ಲಾಪುರ, ಬಸಪ್ಪ ಕರೇಮನಿ, ನಿಂಗಣ್ಣು ಕುರ್ತಕೋಟಿ, ಬಸಪ್ಪ ಮಾದರ, ಸಿರಾಜ ಬಡೇಮಿಯಾ, ಸಲೀಮ ನದಾಫ್, ಫಿರೋಜಖಾನ ಹವಾಲ್ದಾರ ಮುಂತಾದವರು ಇದ್ದರು. 


ಸುದ್ದಿ ಓದಿ