ಧಾರವಾಡ - ಹುಬ್ಬಳ್ಳಿ

14ನೇ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ; ವಾಣಿಜ್ಯ ಬೆಳೆ ಬೆಳೆಯಲು ರೈತರು ಮುಂದಾಗಲಿ -ಶಾಸಕ ಎನ್‌.ಎಚ್‌.ಕೋನರಡ್ಡಿ

14ನೇ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ; ವಾಣಿಜ್ಯ ಬೆಳೆ ಬೆಳೆಯಲು ರೈತರು ಮುಂದಾಗಲಿ -ಶಾಸಕ ಎನ್‌.ಎಚ್‌.ಕೋನರಡ್ಡಿ
14th Dry Chilli Mela launched; Farmers should come forward to grow commercial crops - MLA N.H. Kona


ಹುಬ್ಬಳ್ಳಿ ಫೆ.6: ರೈತರು ಹೊಸ ತಳಿಯ ಬೆಳೆಗಳನ್ನು ಬೆಳೆಯಬೇಕು. ರೈತರು ಹೊಸ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ವಾಣಿಜ್ಯ ಬೆಳೆ ಬೆಳೆಯಲು ರೈತರು ಮುಂದಾಗಬೇಕಿದೆ ಎಂದು ಶಾಸಕರಾದ ಎನ್‌.ಎಚ್‌. ಕೋನರಡ್ಡಿ ಹೇಳಿದರು.  ಇಂದು ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ರೈತ ಉತ್ಪಾದಕ ಸಂಸ್ಥೆ, ಸಂಶಿ (ಕುಂದಗೋಳ) ಹಾಗೂ ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆ ಇವುಗಳ ಸಹಯೋಗದಲ್ಲಿ 14ನೇ ಒಣ ಮೆಣಸಿನಕಾಯಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ಬ್ಯಾಡಗಿ ಮೆಣಸಿನಕಾಯಿ ತಳಿಯನ್ನು ನವಲಗುಂದ, ನರಗುಂದ, ಗದಗ, ಕುಂದಗೋಳ, ಬಾಗಲಕೋಟ ಸೇರಿದಂತೆ ವಿವಿಧೆಡೆ ಬೆಳೆಯಲಾಗುತ್ತದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಹೊಸ ತಳಿಯ ಬೆಳೆಗಳನ್ನು ಸಂಶೋಧಿಸಿದ್ದಾರೆ. ಹೊಸ ತಳಿಗಳು ರೈತರಿಗೆ ತಲುಪಬೇಕು. ಇಂದು ಕೆಂಪು ಖಾರವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಕೆಂಪು ಖಾರದ ಬಳಕೆಯಿಂದ ರೋಗಗಳು ಬರುವುದಿಲ್ಲ. ಬೆಂಗಳೂರು, ಮುಂಬೈನಂತಹ ನಗರಗಳಲ್ಲಿ ಸಹ ಕೆಂಪು ಖಾರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಚಟ್ನಿ ಅಂಗಡಿಗಳು ಸಹ ಅಧಿಕವಾಗಿವೆ. ಕೇಂದ್ರ ಮತ್ತು ಸರ್ಕಾರಗಳು ರೈತರಿಗೆ ಸಹಾಯಧನ, ಬೆಂಬಲ ಬೆಲೆಯನ್ನು ನೀಡಬೇಕು. ದೇಶದ ಬೆಳೆಗಳು ವಿದೇಶಗಳಿಗೆ ರಫ್ತಾಗುವಂತಾಗಬೇಕು ಎಂದು ಅವರು ತಿಳಿಸಿದರು.  ಮೆಣಸಿನಕಾಯಿ ಬೆಳೆ ಬೆಳೆಯಲು ಸಾಕಷ್ಟು ಹಣ ಖರ್ಚಾಗುತ್ತದೆ. ಒಣಮೆಣಸಿನಕಾಯಿ ಬೆಳೆಯುವ ಪ್ರದೇಶ ಕುಂಠಿತವಾಗುತ್ತಿದೆ.

ಹೀಗಾಗಿ ಮೆಣಸಿನಕಾಯಿ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ. ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕು ಎಂದರು.  ಶಾಸಕರಾದ ಎಂ.ಆರ್‌.ಪಾಟೀಲ ಮಾತನಾಡಿ, ಮೆಣಸಿನಕಾಯಿ ಬೆಳೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕಿದೆ. ಒಣ ಮೆಣಸಿನಕಾಯಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡಬೇಕು. ಬ್ಯಾಡಗಿ ಮೆಣಸಿನಕಾಯಿ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕಿದೆ. ಬೆಳೆಗಳಿಗೆ ಉತ್ತಮ ವಾತಾವರಣದ ಅಗತ್ಯವಿರುತ್ತದೆ. ಹೊಸ ತಳಿಗಳ ಬಗ್ಗೆ ರೈತರಿಗೆ ತಿಳಿಸಬೇಕು ಎಂದು ಅವರು ತಿಳಿಸಿದರು.   ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರಿ​‍್ಗರೀಶ, ಪ್ರಧಾನ ವ್ಯವಸ್ಥಾಪಕರಾದ ಡಾ.ರಾಮಚಂದ್ರ ಮಡಿವಾಳ, ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕಾಶಿನಾಥ ಭದ್ರಣ್ಣವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಅಜಿತಕುಮಾರ ಮಶಾಲ್ಡಿ,  ತೋಟಗಾರಿಕೆ ಇಲಾಖೆಯ ಯೋಗೇಶ ಕಿಲಾರಿ, ಉಮೇಶ ಹೆಬಸೂರ, ಮಾಲತೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ