ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರ ಮಾಡುವೆ: ಸಾಸನೂರ
ತಾಳಿಕೋಟೆ 01: ರಾಜ್ಯದಲ್ಲಿಯೇ ಅತಿ ಹಿಂದುಳಿದ ಮತಕ್ಷೇತ್ರವಾದ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು ಮಾದರಿ ಮತಕ್ಷೇತ್ರ ಮಾಡುವ ಕನಸು ನನಸಾಗುತ್ತಿದೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಅವರು ತಾಲೂಕಿನ ಚಬನೂರ ಗ್ರಾಮದಲ್ಲಿ ಲೋಕಪಯೋಗಿ ಇಲಾಖೆ ವತಿಯಿಂದ ಟಿಎಸ್ಪಿ ಅನುದಾನದಲ್ಲಿ 1 ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಕಾರಣದಿಂದ ಕಾಮಗಾರಿಗಳ ಆರಂಭ ವಿಳಂಭವಾಗಿದೆ. ಸದ್ಯ ಸರಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ. ಇನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನವನ್ನು ಕೊಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಚಬನೂರ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಮಾಡಲಾಗುವದು. ಸಾಸನೂರ ದಿಂಡವಾರವರೆಗೆ ದ್ವಿಪತ ರಸ್ತೆ ಕಾಮಗಾರಿ ಮಂಜೂರಾಗಿದೆ. ಸಾಸನೂರ ಮತ್ತು ಚಬನೂರ ಗ್ರಾಮಗಳು ಎರಡು ಕೂಡಾ ನನ್ನ ಕಣ್ಣುಗಳಿದ್ದಂತೆ. ನನಗೆ ನಿಮ್ಮೆಲ್ಲರ ಆಶಿರ್ವಾದ ಇದೆ. ಮಾರ್ಚ ನಂತರ ಇನ್ನಷ್ಟು ಕಾಮಗಾರಿಗಳಗೆ ಅನುದಾನ ದೊರಕಿಸಲಾಗುವದು. ರಾಷ್ಟ್ರೀಯ ಶಿಕ್ಷಣ ಯೋಜನೆಯಿಂದಾಗಿ ಕೇಂದ್ರ ಸರ್ಕಾರವೇ ಶೈಕ್ಷಣಿಕ ಉದ್ದೇಶಗಳಿಗೆ ಅನುದಾನ ನೀಡುತ್ತಿವೆ. ಗ್ರಾಮದಲ್ಲಿ ಪ್ರೌಢ ಶಾಲೆ ಆರಂಭಕ್ಕೆ ಪ್ರಯತ್ನಿಸಲಾಗುವದು. ರೈತರಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೇ ಪರಿಹಾರ ಒದಗಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸನ ಕೂಡು ಜೆಜೆಎಂ ಅಡಿಯಲ್ಲಿ ಮನೆ ಮನೆಗೂ ಶುದ್ದ ನಲ್ಲಿ ನೀರು ಒದಗಿಸುವ ಕೆಲಸ 6 ತಿಂಗಳಲ್ಲಿ ಪೂರ್ಣ ಗೊಳಿಸಲಾಗುವದು. ಗುತ್ತಿಗೆದಾರ ಮತ್ತು ಇಂಜಿನಿಯರುಗಳು ಉತ್ತಮ ಗುಣ ಮಟ್ಟದ ರಸ್ತೆ ನಿರ್ಮಿಸಲು ಸೂಚನೆ ನೀಡಲಾಗಿದೆ ಎಂದರು.
ಚಬನೂರ ಗ್ರಾಮದ ರಾಮಲಿಂಗಯ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮುಖಂಡರಾದ ಪ್ರಭುಗೌಡ ಬಿರಾದಾರ, ಬಸನಗೌಡ ಲಿಂಗದಳ್ಳಿ, ಸಿದ್ದನಗೌಡ ಧನ್ನೂರ ಸೇರಿದಂತೆ ಇತರರು ಇದ್ದರು.