ಡಾ. ಅಂಬೇಡ್ಕರ ಅವಮಾನ ಖಂಡಿಸಿ ತಾಳಿಕೋಟೆ ಬಂದ್ ಯಶಸ್ವಿ
ತಾಳಿಕೋಟೆ: ರಾಯಚೂರದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಡಿದ ಅಪಮಾನ, ತಾಲೂಕಿನ ಸಾಸನೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಗುಟಕಾ ತಿಂದು ಉಗುಳಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ತಾಳಿಕೋಟೆ ಪಟ್ಟಣ ಬಂದ್ ಯಶಸ್ವಿಯಾಗಿದೆ.
ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ತಾಳಿಕೋಟೆ ಬಂದ್ಗೆ ಪಟ್ಟಣದ ವರ್ತಕರು, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. ಆಸ್ಪತ್ರೆ, ಮೆಡಿಕಲ್ ಸ್ಟೋರ್ಗಳನ್ನು ಹೊರತಪಡಿಸಿ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನ ಬಂದ್ ಮಾಡಲಾಗಿತ್ತು. ಬಸ್ ಸಂಚಾರ ಎಂದಿನಂತೆ ಇತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನು ಸೋಮವಾರವಾದ್ದರಿಂದ ಕಾಯಿಪಲ್ಲೆ ವ್ಯಾಪಾರಸ್ಥರು ಬೆಳಿಗ್ಗೆ ಸ್ವಲ್ಪ ವ್ಯಾಪಾರ ಮಾಡಿದರು. ನಂತರ ಕಾಯಿಪಲ್ಲೆ ವ್ಯಾಪಾರವೂ ಕೂಡ ಬಂದ್ ಮಾಡಲಾಗಿತ್ತು. ಇದರಿಂದ ತಾಳಿಕೋಟೆ ಪಟ್ಟಣ ಬಂದ್ ಯಶಸ್ವಿಯಾಯಿತು.
ಮಧ್ಯಾಹ್ನ ಡಾ.ಬಿ.ಆರ್.ಅಂಬೇಢ್ಕರ ಭವನದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ ವೃತ್ತ, ಕತ್ರಿ ಬಜಾರ, ಶಿವಾಜಿ ವೃತ್ತದ ಮೂಲಕ ಹಾಯ್ದು ಬಸವೇಶ್ವರ ವೃತ್ತಕ್ಕೆ ಆಗಮಿಸಿ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.
ಡಿಎಸ್ಎಸ್ ಬೆಳಗಾವಿ ವಿಭಾಗ ಸಂಘಟನಾ ಸಂಚಾಲಕ ದೇವಿಂದ್ರ ಹಾದಿಮನಿ, ಸಿದ್ದು ಬಾರಿಗಿಡ, ಚಂದ್ರಶೇಖರ ದೊಡಮನಿ, ಡಿಎಸ್ಎಸ್ ತಾಲೂಕು ಸಂಚಾಲಕ ಮಹೇಶ ಚಲವಾದಿ, ಸಂಘಟನಾ ಸಂಚಾಲಕ ಮಹಾಂತೇಶ ಕಟ್ಟಿಮನಿ ಮಾತನಾಡಿ, ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾಜುನ ಗೌಡ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ, ಕೂಡಲೇ ಜಿಲ್ಲಾ ನ್ಯಾಯಾಧೀಶರ ವಿರುದ್ದ ದೇಶದ್ರೋಹದ ಕೇಸ್ನ್ನು ಹಾಕಿ ನ್ಯಾಯಾಧೀಶ ಸ್ಥಾನದಿಂದ ವಜಾ ಮಾಡಬೇಕು. ಸಾಸನೂರ ಘಟನೆಯನ್ನು ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಒಕ್ಕೂಟದ ಗೌರವಾಧ್ಯಕ್ಷ ಎಸ್.ಬಿ.ಕಟ್ಟಿಮನಿ, ತಾಲೂಕು ದಂಡೋರ ಸಮಿತಿ ಅದ್ಯಕ್ಷ ಸಿದ್ದು ಪೀರಾಪೂರ, ದಲಿತ ಮುಖಂಡರಾದ ಮಾಳಪ್ಪ ಮಾಳಳ್ಳಿ, ರಮೇಶ ಹೊನ್ನಳ್ಳಿ, ಕಾಶಿನಾಥ ಕಾರಗನೂರ, ಬಸವರಾಜ ಗುಂಡಕನಾಳ, ಬಸವರಾಜ ಬಳಗಾನೂರ, ನಿಂಗಣ್ಣ ಹೊಸಮನಿ, ಪರಶುರಾಮ ಸಾಗರ, ಬಸವರಾಜ ಬಡಿಗೇರ, ಗೌತಮ್ಮ ಪತ್ತೆಪೂರ, ನಜೀರ ಚೋರಗಸ್ತಿ, ಗೋಪಾಲ ಕಟ್ಟಿಮನಿ, ದೇವು ಗೋಟಗುಣಕಿ, ಶಂಕ್ರ್ಪ ಗುಂಡಕನಾಳ, ಸಾಯಬಣ್ಣ ಗುಂಡಕನಾಳ, ಗುರುಪ್ರಸಾದ ಬಿ.ಜಿ, ಬಸವರಜ ಕೋಳ್ಯಾಳ, ಈರಗಂಟಿ ಬಡಿಗೇರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.