ಓ.ಪಿ.ಎಸ್. ಮರುಜಾರಿಗೆ ಆಗ್ರಹಿಸಿ ಪತ್ರ ಚಳುವಳಿ
ಓ.ಪಿ.ಎಸ್. ಮರುಜಾರಿಗೆ ಆಗ್ರಹಿಸಿ ಪತ್ರ ಚಳುವಳಿ
ಕಂಪ್ಲಿ 29: ಓ.ಪಿ.ಎಸ್ ಮರುಜಾರಿಗೆಗೆ ಆಗ್ರಹಿಸಿ, ಇಲ್ಲಿನ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಹಾಗೂ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು ಮಂಗಳವಾರ ಪತ್ರ ಚಳುವಳಿ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಅಂಚೆ ಪತ್ರಗಳನ್ನು ರವಾನಿಸಿದರು. ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಸಹಕಾರ್ಯದರ್ಶಿ ಅಂಬಿಗರ ಮಂಜುನಾಥ ಮಾತನಾಡಿ, 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಓ.ಪಿ.ಎಸ್ ಮರುಜಾರಿ ಮಾಡುವುದಾಗಿ ಭರವಸೆ ನೀಡಿದಂತೆ ಸಿಎಂ ಸಿದ್ದರಾಮಯ್ಯನವರು ಕೂಡಲೇ ಓ.ಪಿ.ಎಸ್ ಮರುಜಾರಿಗೊಳಿಸಬೇಕು.
ಎನ್.ಪಿ.ಎಸ್ ರದ್ಧತಿ ಸಮಿತಿ, ಕೇಂದ್ರದ ಯು.ಪಿ.ಎಸ್ ಮಾದರಿ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. ನೌಕರರ ಕುಟುಂಬದ ಭದ್ರತೆಗಾಗಿ ಕೂಡಲೇ ಓ.ಪಿ.ಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ರೇವಣ್ಣ ಮಾತನಾಡಿ, ಓ.ಪಿ.ಎಸ್ ಜಾರಿಗಾಗಿ ಎಲ್ಲರೂ ಭಿನ್ನಾಭಿಪ್ರಾಯ ತೊರೆದು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ. ಓ.ಪಿ.ಎಸ್ ಮರುಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಫೆ.7ರಂದು ಬೆಂಗಳೂರಿನಲ್ಲಿ ನಡೆವ ಬೃಹತ್ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಎಲ್ಲಾ ಎನ್.ಪಿ.ಎಸ್ ನೌಕರರು ಪಾಲ್ಗೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಜಿ.ಪಿ.ಟಿ ಸಂಘದ ಕಾರ್ಯದರ್ಶಿ ನಿಂಗರಾಜ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಂ.ಬಸವರಾಜ, ಸಿಆರ್ಪಿಗಳಾದ ಭೂಮೇಶ್ವರ್, ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿಮಠ, ಇಸಿಓ ಎಂ.ರೇವಣ್ಣ, ಮೂರ್ತಿ, ಪಿ.ರುದ್ರ್ಪ, ರಾಜು ಬಿಲಂಕರ್, ಮೇಲಾರೆಡ್ಡಿ, ನಜೀರ್, ಅಮರೇಶ, ಬೀರಲಿಂಗಪ್ಪ, ವೆಂಕಟರಮಣ, ಗೋವಿಂದಪ್ಪ, ಸುನೀತಾ, ಶಿಲ್ಪಾ, ಬಿ.ಗಾಯತ್ರಿ, ಉಮಾದೇವಿ ಇತರರಿದ್ದರು.