’ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ " ..ಎಂ.ಅಶೋಕ
’ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ " ..ಎಂ.ಅಶೋಕ
ಹೂವಿನಹಡಗಲಿ 05: ಉತ್ತರ ಕರ್ನಾಟಕ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಗಣಪ ಹೋದ ಮೇಲೆ ಜೋಕುಮಾರನು ಹಬ್ಬ ಜನಪದ ಸಂಸ್ಕೃತಿ ವಿಶಿಷ್ಟ ಆಚರಣೆ ನಡೆಯುತ್ತದೆ.ತಾಲೂಕಿನ ಹೊಳಗುಂದಿ-ಬಾವಿಹಳ್ಳಿ ಗ್ರಾಮದಲ್ಲಿ ಬಾರಿಕರು ಮಹಿಳೆಯರು 7ದಿನಗಳು ಮನೆ ಮನೆಗೆ ಬಂದು ..’ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ,ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ... ಜೋಕುಮಾರ... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿ ತನ್ನ ಮಡಿಯಂದಾ ಜೋಕುಮಾರ’- ಹೀಗೆ ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರರನ್ನು ಆರಾಧಿಸುವ ಜನಪದಿಯರ ಹಬ್ಬ ಆರಂಭವಾಗಿದೆ.ಭಾದ್ರಪದ ಅಷ್ಟಮಿಯ ದಿನದಿಂದ ಆರಂಭವಾಗುವ ಜೋಕುಮಾರಸ್ವಾಮಿ ಹಬ್ಬ, ಜನಪದ ಸಂಸ್ಕೃತಿಯ ವಿಶಿಷ್ಟ ಆಚರಣೆ. ಜೋಕುಮಾರನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಕೃಷಿಕರಲ್ಲಿ ಹಾಸುಹೊಕ್ಕಾಗಿದೆ.ಜೋಕುಮಾರ ಗಂಗಾಮತ (ಬೆಸ್ತ) ಸಮುದಾಯದ ಮನೆಯಲ್ಲಿ ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜನ್ಮ ತಾಳುತ್ತಾನೆ. ಗಂಗಾಮತ ಸಮಾಜದ ಬಾರಿಕರ ರೇಣುಕಮ್ಮ.ಅನ್ನಪೂರ್ಣ.
ಸರ್ವಕ್ಕ. ಸೇವಕ್ಕ ಅವರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಾಡು ಹಾಡುತ್ತಾ ಹೊಳಗುಂದಿ .ಬಾವಿಹಳ್ಳಿ ಪ್ರತಿ ಮನೆಗೆ ಹೋಗುತ್ತಾರೆ .ಮಣ್ಣಿನಿಂದ ತಯಾರಿಸಿದ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತಾ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು ಎಂಬುದು ಆರಾಧಕರು ಹಾಕಿಕೊಂಡಿರುವ ಸಂಪ್ರದಾಯ.ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿಗಳನ್ನು ಕೊಡುತ್ತಾರೆ. ಇದನ್ನು ಭಾನುವಾರ ದಿನ ಬೆಳಗಿನ ಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರೆಯಿಸಿ ಚರಗ ಹೊಡೆಯುತ್ತಾರೆ. ಹೀಗೆ ಹೊಡೆಯುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಕೃಷಿಕರಲ್ಲಿದೆ.ಏಳು ದಿನಗಳ ಸಂಪ್ರದಾಯಿಕ ವಿಧಿ-ವಿಧಾನಗಳು ಮುಗಿದ ನಂತರ ಪರಿಶಿಷ್ಟರ ಮನೆಯಲ್ಲಿ ಜೋಕುಮಾರನಿಗೆ ಚೂರಿ ಹಾಕುತ್ತಾರೆ. ನಂತರ ಬಟ್ಟೆ ತೊಳೆಯುವ ಮಡಿವಾಳರ ಬಂಡೆಯ ಅಡಿಯಲ್ಲಿ ಆತನ ಶವ ಹೂತು ಬರುತ್ತಾರೆ. ನಂತರ, ಮಡಿವಾಳ ಸಮಾಜದವರು ಜೋಕುಮಾರನ ಅಂತ್ಯ ಸಂಸ್ಕಾರ ನೇರವೇರಿಸುತ್ತಾರೆ. ಏಳು ದಿನಗಳ ಕಾಲ ಊರೂರು ಅಲೆದ ಸಂದರ್ಭದಲ್ಲಿ ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಸಿ ಸಾಮೂಹಿಕವಾಗಿ ಅನ್ನ ಸಂತರೆ್ಣ ನಡೆಯಲಿದೆ.