"ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ಜೆ.ಎಸ್.ಎಸ್ ನಲ್ಲಿ ನುಡಿನಮನ"
ಧಾರವಾಡ 18: ಜೆ.ಎಸ್.ಎಸ್ ಬನಶಂಕರಿ ಕಲಾ ಮತ್ತು ವಾಣಿಜ್ಯ ಎಸ್ ಕೆ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ "ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನ" ಸಲ್ಲಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಫೈಟಾನ್ ಕ್ಲಬ್, ವಿಜ್ಞಾನ ಸಂಘ ಹಾಗೂ ಎನ್ ಎಸ್ ಎಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ಸಲ್ಲಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ. ಆರ್. ಪರಿಮಳ ಅವರು ವೃಕ್ಷಮಾತೆ ತಿಮ್ಮಕ್ಕನ ಕುರಿತು ಉಪನ್ಯಾಸ ನೀಡುತ್ತ ಭಾವುಕರಾಗಿ ತಿಮ್ಮಕ್ಕನ ಸಂಪೂರ್ಣ ಜೀವನ ಚಿತ್ರಣವನ್ನು ನೀಡುತ್ತ ಅವರೊಂದಿಗೆ ಮಾಡಿದ ಸಂದರ್ಶನ ಕುರಿತು ಸುಧೀರ್ಘವಾಗಿ ಮಾತನಾಡಿದರು. ಸಾವಿರಾರು ಮರಗಳನ್ನು ಐದು ಕಿಲೋಮೀಟರ್ ಉದ್ದಕ್ಕೂ ನೆಟ್ಟು ಮಕ್ಕಳಂತೆ ಜೋಪಾನ ಮಾಡಿ, ನೀರುಣಿಸಿ ಪೋಷಿಸಿ ಬೆಳೆಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾತಾಯಿಯ ನಿಸರ್ಗ ಪ್ರೇಮ ಮೆಚ್ಚುತ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲರಾದ ಡಾ. ವೆಂಕಟೇಶ ಮುತಾಲೀಕ ಅವರು ಸಾಲುಮರದ ತಿಮ್ಮಕ್ಕನ ಅದ್ವಿತೀಯ ಸಾಧನೆಯ ಕುರಿತು ಬೆಳಕು ಚೆಲ್ಲಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾ ಐರಸಂಗ ವೃಕ್ಷಮಾತೆ ತಿಮ್ಮಕ್ಕನ ಸಾಧನೆ ಕುರಿತು ಬರೆದ ಕವನ ವಾಚಿಸಿದರು. ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಜೆ.ಎಸ್.ಎಸ್ ಮಹಾವಿದ್ಯಾಲಯದ ಆವರಣದಲ್ಲಿ ವಿರಳ ಸಸ್ಯ ಅಶೋಕ ವೃಕ್ಷದ ಸಸಿಯನ್ನು ವೃಕ್ಷಮಾತೆ ತಿಮ್ಮಕ್ಕನ ಹೆಸರಿನಲ್ಲಿ ನೆಡಲಾಯಿತು.
ಡಾ ವಿ ಎಸ್ ಭೀಮರೆಡ್ಡಿ, ಪ್ರೊ. ಅವಂತಿಕ ರೊಟ್ಟಿ, ಡಾ. ನಳಿನಿ ಕುಲಕರ್ಣಿ, ಡಾ. ಶೌಕತ್ ಅಲಿ, ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕೇತರ ಬಂಧುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕು.ಶರಧಿ, ಸಿದ್ಧೇಶ ಪ್ರಾರ್ಥಿಸಿದರು. ಡಾ. ಜಯಶ್ರೀ ಕುರಂದವಾಡ ಸ್ವಾಗತಿಸಿದರು. ಡಾ.ರತ್ನಾ ಐರಸಂಗ ವಂದಿಸಿದರು. ಕು.ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.