ಏ. 24ರಿಂದ ಜೀ 5ನಲ್ಲಿ 'ಜೆರಾಕ್ಸ್‌' ವೆಬ್ ಸೀರೀಸ್ ಸ್ಟ್ರೀಮಿಂಗ್

ಏ. 24ರಿಂದ ಜೀ 5ನಲ್ಲಿ 'ಜೆರಾಕ್ಸ್‌' ವೆಬ್ ಸೀರೀಸ್ ಸ್ಟ್ರೀಮಿಂಗ್

ಜೀ5ನ ಬಹುನೀರೀಕ್ಷಿತ ವೆಬ್ ಸರಣಿ 'ಜೆರಾಕ್ಸ್‌' ಇದೇ ಏ. 24ರಂದು ಸ್ಕ್ರೀಮಿಂಗ್ ಆಗುತ್ತಿದೆ. 6 ಸಂಚಿಕೆಗಳುಳ್ಳ ಈ ಹಾಸ್ಯ ವೆಬ್ ಸರಣಿಯ ಟ್ರೇಲರ್ ಈಗಾಗಲೇ ಜನರನ್ನು ರಂಜಿಸುತ್ತಿದೆ. ಖ್ಯಾತ ನಟ, ನಿರ್ಮಾಪಕ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಲಾಂಛನದಲ್ಲಿ ಹಾಗೂ 'ಬ್ಲಿಂಕ್' ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಜೆರಾಕ್ಸ್‌'ನಲ್ಲಿ ನಾಗಭೂಷಣ್, ಪಾಯಲ್ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ ಮುಂತಾದ ಕಲಾವಿದರಿದ್ದಾರೆ.  

ಮಳವಳ್ಳಿಯ ರಾಯದುರ್ಗದ ಪ್ರಕಾಶ (ನಾಗಭೂಷಣ) ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನಾಗಿರುತ್ತಾನೆ. ಅವನ ಜೆರಾಕ್ಸ್‌ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನ ಬದಲಾಗುತ್ತದೆ. ಅವನು ತೆಗೆಯುವ ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದು ಅವನ ಜೀವನ ಉಲ್ಟಾಪಲ್ಟಾವಾಗುತ್ತದೆ. ಇದರಿಂದ ಆಗುವ ಅಚಾನಕ್ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಲಿ ಧನಂಜಯ ಮಾತನಾಡಿ, 'ಜೀನಲ್ಲಿ ವೆಬ್ ಸೀರಿಸ್ ಶುರು ಆಗುತ್ತಿದ್ದಾಗಲೇ ನಂಗೆ ಕಾಲ್ ಬಂದಿತ್ತು. ಆಗ ವೆಬ್ ಸರಣಿ ಬಗ್ಗೆ ಐಡಿಯಾ ಇರಲಿಲ್ಲ. ಹಾಗಾಗಿ ಕೆಲಸ ಮಾಡಲು ಹೋಗಲಿಲ್ಲ. ನಿರ್ದೇಶಕ ಶ್ರೀನಿಧಿಯಿಂದ ಈ ಜೆರಾಕ್ಸ್‌ ಕಥೆ ಕೇಳಿ ಸಿನಿಮಾ ಮಾಡೋಣ ಬಾ ಎಂದೆ. ಮುಂದಿನ ದಿನಗಳಲ್ಲಿ ಅವರ ಜೊತೆ ಸಿನಿಮಾ ಮಾಡುವ ಯೋಜನೆ ಇದೆ. ಈ ಸೀರೀಸ್ ಮೊದಲಬಾರಿ ನೋಡಿದಾಗ ತುಂಬಾ ಖುಷಿ ಆಯ್ತು. ಜನರಿಗೂ ಇದು ಇಷ್ಟ ಆಗುತ್ತದೆ ಎಂದರು.  

ಇದೇ ಸಂದರ್ಭದಲ್ಲಿ ಜೀ 5 ಕನ್ನಡ ಓಟಿಟಿ ಹೆಡ್ ಪ್ರದೀಪ್ ಮಾತನಾಡಿ, 'ಒಂದು ವರ್ಷದ ಹಿಂದೆ 'ಅಯ್ಯನ ಮನೆ'ಯಿಂದ ಕನ್ನಡದಲ್ಲಿ ವೆಬ್ ಸೀರಿಸ್ ಜರ್ನಿ ಶುರು ಆಯ್ತು. ಅದು ಹಿಟ್ ಆಯ್ತು. ಆನಂತರ 'ಶೋಧ', 'ಮಾರಿಗಲ್ಲು' ಸೇರಿದಂತೆ ಹಲವು ಸೀರೀಸ್‌ಗಳನ್ನು ಜೀ 5ನಲ್ಲಿ ಪ್ರಸಾರ ಮಾಡಲಾಯಿತು. ಈಗ ಜೆರಾಕ್ಸ್‌ ಪ್ರಸಾರವಾಗುತ್ತಿದೆ. ಈ ಹಿಂದಿನ ಎಲ್ಲಾ ಸೀರಿಸ್‌ನಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್ ಅಂಶಗಳಿದ್ದವು. ಇದೇ ಮೊದಲಬಾರಿ ನಾವು ಜೆರಾಕ್ಸ್‌ ಮುಖೇನ ಕಾಮಿಡಿ ಕಥೆ ತೋರಿಸಲಿದ್ದೇವೆ. ಇಂತಹ ಸೀರೀಸ್‌ಗಳ ಮೂಲಕ ಕನ್ನಡದಲ್ಲಿ ಒಳ್ಳೆಯ ಕಥೆ, ತಂಡ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಜರ್ನಿ ಹೀಗೆ ಕಂಟಿನ್ಯೂ ಆಗುತ್ತದೆ. ಜೆರಾಕ್ಸ್‌ ಮಷಿನ್ ಇಟ್ಟು ಮಾಡಿದ ಮೊದಲ ಸೀರೀಸ್ ಇದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಹೇಳಿದರು. ವೇದಿಕೆಯಲ್ಲಿ 'ಜೆರಾಕ್ಸ್‌' ಸೀರೀಸ್‌ನ ನಾಯಕ ನಾಗಭೂಷಣ, ನಾಯಕಿ ಪಾಯಲ್ ಚಂಗಪ್ಪ, ನಿರ್ದೇಶಕ ಶ್ರೀನಿಧಿ ಬೆಂಗಳೂರು, ಕಲಾವಿದ ಮಂಜು ಪಾವಗಡ ಮುಂತಾದವರು ತಮ್ಮ ಅನುಭವ ಹಂಚಿಕೊಂಡುರು. 


ಸುದ್ದಿ ಓದಿ