'ಗುಡಿಸಲು ಮುಕ್ತ ಪಟ್ಟಣವನ್ನಾಗಿ ಮಾಡುವುದೇ ಮುಖ್ಯ ಗುರಿ'
ಸಿಂದಗಿ11: ಪಟ್ಟಣದ ವಿವಿಧ ಉದ್ಯಾನವನಗಳಲ್ಲಿ ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕಡು ಬಡವರಿಗೆ ಸೂರು ನೀಡುವ ಮೂಲಕ ಗುಡಿಸಲು ಮುಕ್ತ ಪಟ್ಟಣವನ್ನಾಗಿ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಸೋಮವಾರ ಪುರಸಭೆಯ ಆಶ್ರಯ ಕಮಿಟಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪಟ್ಟಣದ ಕಡುಬಡವ ಗುಡಿಸಲು ನಿವಾಸಿಗಳಿಗೆ ಸೂರು ಕಲ್ಪಿಸಲು ಪಟ್ಟಣದಲ್ಲಿ 35 ಎಕರೆ ಸ್ಥಳ ಲಭ್ಯವಿದೆ. ಪ್ರಸ್ತುತ್ 185 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಹಕ್ಕು ಪತ್ರಗಳು ಸಿದ್ದವಾಗಿವೆ. ಈ 185 ಫಲಾನುಭವಿಗಳ ಪಟ್ಟಿಯನ್ನು ಪುನಃ ಪರೀಶೀಲನೆ ಮಾಡಿ ಹಕ್ಕು ಪತ್ರ ನೀಡುವಲ್ಲಿ ಪಾರದರ್ಶಕತೆ ಮಾಡಲಾಗುವುದು ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿನ ಸರ್ವೆ ನಂ. 474ರ 10 ಎಕರೆ ಸ್ಥಳದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ 250 ಮನೆಗಳನ್ನು ಅತೀಶೀಘ್ರದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿನ ಉದ್ಯಾನವನಗಳಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುವವರು ಆ ಸ್ಥಳ ಖಾಲಿ ಮಾಡಬೇಕು. ಅಂಥ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ನೀಡಲಾಗುವುದು. ಪಟ್ಟಣದ ಸರ್ವೆ ನಂ.566/2 ರಲ್ಲಿ 411 ನಿವೇಶನಗಳು ಲಭ್ಯವಿರುತ್ತವೆ. ಈಗಾಗಲೇ 185 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಊಟ ಮಾಡಿದವನೇ ಊಟ ಮಾಡಬಾರದು. ಮನೆ ಪಡೆದ ಫಲಾನುಭವಿಗಳೇ ಪುನಃ ಮನೆ ಪಡೆಯಬಾರದು. ಪ್ರತಿ ಆಶ್ರಯ ಯೋಜನೆಗಳ ಮನೆ ನಿರ್ಮಾಣ ಕಾರ್ಯ, ಹಕ್ಕು ಪತ್ರ ನೀಡುವ ಕಾರ್ಯ ಶೀಘ್ರದಲ್ಲಿ ಮಾಡಬೇಕು. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ ಭೂಸನೂರ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಪುರಸಭೆಯ ಆಶ್ರಯ ಕಮೀಟಿ ಸದಸ್ಯರನ್ನು ಪುರಸಭೆ ಆಡಳಿತದಿಂದ ಸನ್ಮಾನ ಮಾಡಲಾಯಿತು.
ಪುರಸಭೆಯ ಆಶ್ರಯ ಕಮಿಟಿ ಸದಸ್ಯ ರಾಖೇಶ ಕಂಟಿಗೊಂಡ, ಖಾಜು ಬಂಕಲಗಿ, ರಜಾಕ ಮುಜಾವರ ಮಾತನಾಡುತ್ತಾ ವಿವಿಧ ಯೋಜನೆಗಳಲ್ಲಿ ಕಡುಬಡವರಿಗೆ ಹಂಚಿಕೆ ಮಾಡುವ ನಿವೇಶನಗಳು ನಿಜವಾದ ಫಲಾನುಭವಿಗಳಿಗೆ ಸಲ್ಲಬೇಕು. ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿ ಇರಬಾರದು. ಈಗಾಗಲೇ ಆಯ್ಕೆ ಮಾಡಿದ 185 ಫಲಾನುಭವಿಗಳ ಪಟ್ಟಿಯನ್ನು ಪರೀಶೀಲನೆ ಮಾಡಬೇಕು ಎಂದು ಹೇಳಿದರು.
ಪುರಸಭೆಯ ಆಶ್ರಯ ಕಮಿಟಿ ಸದಸ್ಯೆ ಲಕ್ಷ್ಮೀ ನಂದಿಕೋಲ, ಪುರಸಭೆ ಉಪಾಧ್ಯಕ್ಷ ಹಾಸಿಂಪೀರ ಆಳಂದ ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುಧಗೋಳ್ಕರ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ವಿದ್ಯಾನಗರ ಕೈಗಾರಿಕಾ ಪ್ರದೇಶ: ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ವರ್ಗಗದ ಜನರುಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕೈಗಾರಿಕಾ ಪ್ರದೇಶದ ಸೂತ್ತಮುತ್ತ ಗುಡಿಸಲು ಮುಕ್ತ ಮಾಡುವುದೇ ನನ್ನ ಗುರಿ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿನ ಕೈಗಾರಿಕಾ ಪ್ರದೇಶದ ಹತ್ತಿರ ಗುಡಿಸಲು ನಿವಾಸಿಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದ ಕೈಗಾರಿಕಾ ಪ್ರದೇಶದ ಹತ್ತಿರದಲ್ಲಿನ ಗುಡಿಸಲು ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಮನೆಗಳ ನಿರ್ಮಾಣ ಕಾರ್ಯ ಬೇಗನೆ ಕೈಕೊಳ್ಳಲಾಗುವುದು. ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ನಿಮ್ಮ ಜೀವನ ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸುವ ಕಾರ್ಯ ಕೈಗೊಳ್ಳುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದ ಹತ್ತಿರದಲ್ಲಿನ ಗುಡಿಸಲು ನಿವಾಸಿಗಳು ಶಾಸಕ ರಮೇಶ ಭೂಸನೂರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸುದರ್ಶನ ಜಿಂಗಾಣಿ, ರವಿ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.