‘ಮನುಷ್ಯ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಬೇಕಿದೆ’
ಸವದತ್ತಿ 19: ಸಮಾಜದಲ್ಲಿ ಬಹಳಷ್ಟು ಯುವಕರು ಹಾಗೂ ವಿದ್ಯಾರ್ಥಿಗಳು ಅನೇಕ ವಿಚಾರಗಳಿಂದಾಗಿ ಮಾನಸಿಕ ಒತ್ತಡದ ನಡುವೆ ಬದುಕು ಸಾಗಿಸುತ್ತಿದ್ದು, ಇದರಿಂದಾಗಿ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಖ್ಯಾತ ಮನೋರೋಗ ತಜ್ಞರಾದ ಡಾ.ಆನಂದ ಪಾಂಡುರಂಗಿ ಹೇಳಿದರು.
ಪಟ್ಟಣದ ಮಧ್ಯಭಾಗದ ಗಾಂಧಿಚೌಕದಲ್ಲಿ ಲಿಂ.ಬಾಬಣ್ಣ ಹಂಪಣ್ಣವರ ವೇದಿಕೆಯ ಮೇಲೆ ನಡೆಯುತ್ತಿರುವ 43ನೇಯ ನಾಡಹಬ್ಬ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ತನ್ನ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಬೇಕಿದ್ದು, ಈಗಿನ ಒತ್ತಡದ ಜೀವನ ಯುವಕರಿಗೆ ಅಷ್ಟೆ ಅಲ್ಲ ದೊಡ್ಡವರೂ ಸಹ ಒಂದಲ್ಲ ಒಂದು ಖಾಯಿಲೆಯಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಾನಸಿಕ ಒತ್ತಡದಿಂದಾಗಿ ಬಹಳಷ್ಟು ಯುವಕರು ದುಷ್ಚಟಗಳ ದಾಸರಾಗಿ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಟಿಎಚ್ಓ ಡಾ.ಶ್ರೀಪಾದ ಸಬನೀಸ ಹಾಗೂ ಡಾ.ಅಭಿನಂದನ ಕಬ್ಬಿಣ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವದರ ಜೊತೆಗೆ ಅನಾವಶ್ಯಕ ಒತ್ತಡಗಳಿಗೆ ಅವಕಾಶ ನೀಡದೆ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕೆಂದರು.
ಖ್ಯಾತ ತಜ್ಞ ವೈದ್ಯರಾದ ಡಾ.ಸಿ.ಬಿ.ನಾವದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ.ಆನಂದ ಪಾಂಡುರಂಗಿ ಹಾಗೂ ಅನುಪಮಾ ಆನಂದ ಪಾಂಡುರಗಿ ದಂಪತಿಗಳನ್ನು 43ನೇಯ ನಾಡಹಬ್ಬ ನವರಾತ್ರಿ ಉತ್ಸವ ಸಮಿತಿ ಪರವಾಗಿ ಬಸವರಾಜ ಪುರದಗುಡಿ ಸನ್ಮಾನಿಸಿ ಗೌರವಿಸಿದರು.
ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದ ದಂಡಪಾಣಿ ದೀಕ್ಷೀತರು ಸಾನ್ನಿಧ್ಯವಹಿಸಿದ್ದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಮಂಜುನಾಥ ಬಾರಕೇರ, ಡಾ.ಮೌನೇಶ ಪೋತದಾರ, ಬಸವರಾಜ ಅತ್ತಿಗೇರಿ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕುರುವಿಕೊಪ್ಪ ಗ್ರಾಮದ ದುರ್ಗಾದೇವಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿದರು
ರಾತ್ರಿ ಬಾಬು ಸ್ಟೇಪ್ ಆಪ್ ಡ್ಯಾನ್ಸ ಅಕಾಡೆಮಿ ಸವದತ್ತಿ ಇವರಿಂದ ನೃತ್ಯ ಹಾಗೂ ಮನರಂಜನೆ ಕಾರ್ಯಕ್ರಮಗಳು ನೆರವೇರಿದವು.