ಜೆ ಎಸ್ ಎಸ್ ಕಾಲೇಜಿನಲ್ಲಿ “ಪುನರ್ಮಿಲನ” ಕಾರ್ಯಕ್ರಮ
ಧಾರವಾಡ 09: ಜೆ ಎಸ್ ಎಸ್ ಕಾಲೇಜಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಮತ್ತೆ ಸೇರುವ ಅವಕಾಶ ಕಲ್ಪಿಸುವ “ಪುನರ್ಮಿಲನ” ಕಾರ್ಯಕ್ರಮ ಮೇ. 10 ಶನಿವಾರದಂದು ಕಾಲೇಜಿನ ಸನ್ನಿಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುನರ್ಮಿಲನ್ ಸಮಿತಿ ಅಧ್ಯಕ್ಷ ನರಸಿಂಹ ರಾವ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ ಅವರು. ಈ ಕಾಲೇಜಿನಲ್ಲಿ ಕಲಿತು, ಬೇರೆ, ಬೇರೆ ರಾಜ್ಯಗಳು, ದೇಶಗಳಲ್ಲಿರುವ ಬಹಳಷ್ಟು ಜನರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದು ತರಗತಿ ಅಥವಾ ಕೆಲವೇ ಕೆಲವು ಜನರು ಸೇರಿ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ. ಆದರೆ ನಾವು ಕಾಲೇಜಿನಲ್ಲಿ ಕಲಿತ ಪ್ರತಿಯೊಬ್ಬರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ನಮ್ಮ ಅಂದಾಜಿನ ಪ್ರಕಾರ 8 ನೂರರಿಂದ ಸಾವಿರ ಜನರು ಸೇರುವ ನೀರೀಕ್ಷೆ ಇದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಜೆಎಸ್ಎಸ್ ಕಾಲೇಜಿನಲ್ಲಿ ಇದೇ ಮೊದಲು.
ಕಾರ್ಯಕ್ರಮಕ್ಕೆ ಬಂದವರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ರಾಜ್ಯದ ಕಾನೂನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಖ್ಯಾತ ಮನೋವೈದ್ಯ, ಸಾಹಿತಿಗಳೂ ಆಗಿರುವ ಡಾ. ಆನಂದ ಪಾಂಡುರಂಗಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆಂದೇ ಪುನರ್ಮಿಲನ ಸಮಿತಿ ಎಂದೇ ರಚಿಸಲಾಗಿದೆ. ಇದಕ್ಕೆ ಅಧ್ಯಕ್ಷ, ಕಾರ್ಯದರ್ಶಿಗಳನ್ನೊಳಗೊಂಡ ವಿವಿಧ ಸಮಿತಿಗಳನ್ನೂ ಮಾಡಲಾಗಿದೆ.
ಈ ಕಾಲೇಜಿನ ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿನ ಮೂರೂ ವಿಭಾಗದಲ್ಲಿನ ಸುಮಾರು 30 ಶಿಕ್ಷಕರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಅನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಎಲ್ಲ ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಕ್ಯಾಂಪಸ್ ರೌಂಡ್ ಎಂದು ತೆರಳಲಿದ್ದು ತಾವು ಕಲಿಯಬೇಕಾದರೆ ರೂಮ್ಗಳು ಹೇಗಿದ್ದವು? ಅಲ್ಲದೇ ಈ ಕಾಲೇಜಿನಲ್ಲಿ ಹುಡುಗರ ನೆಚ್ಚಿನ ತಾಣವಾಗಿದ್ದ ಗಟಾರದಂಡಿ ಇಂಥವೆಲ್ಲ ನೆನಪಿಸಿಕೊಳ್ಳಲಿದ್ದಾರೆ.
ನಮಗೆ ಸಮಯ ತೀರ ಕಡಿಮೆ ಸಿಕ್ಕಿದ್ದರಿಂದ ಇಷ್ಟೇ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಅನುಮತಿ ಪಡೆದು ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ, ಯೋಚನೆ ಎರಡೂ ಇವೆ. ದಯವಿಟ್ಟು ತಾವು ನಮ್ಮ ಕಾರ್ಯಕ್ರಮಕ್ಕೆ ಬರಬೇಕು ಎಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಶ್ಯಾಮ್ ಮಲ್ಲನಗೌಡರ್. ಕೋರ್ ಕಮಿಟಿ ಸದಸ್ಯರಾದ ರವಿಕುಮಾರ್ ಕಗ್ಗಣ್ಣವರ. ಅರವಿಂದ ಜಮಖಂಡಿ. ವಿಜಯ್ ಇನಾಮದಾರ್. ರವಿ ಭಾಂಡಗೆ. ಜಿತೇಂದ್ರ ನಾಡಗೇರ. ಸಂದೀಪ್ ಚಿಲಕವಾಡ. ಮಹಾವೀರ ಉಪಾಧ್ಯೆ, ಭಾರತಿ ಆರ್ ಕೆ., ಜಯಾ ಪಾಟೀಲ್, ಇಮಾಮ ಒಂಟಿ, ಗಂಗಾಧರ್ ಇದ್ದರು.