"ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ: ಬಸವರಾಜ ನಾಲತವಾಡ
ಲೋಕದರ್ಶನ ವರದಿ
ಧಾರವಾಡ 06: ‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಮತ್ತು ಸಾಂಸ್ಕೃತಿಕ ಸಂಭ್ರಮದಂತಹ ವೇದಿಕೆಗಳು ಸಹಕಾರಿಯಾಗಿವೆ. ಪ್ರತಿಭೆಯನ್ನು ಗುರುತಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುವುದರಿಂದ ಅವರೊಳಗಿನ ಸೃಜನಶೀಲತೆ ಅರಳುತ್ತವೆ". ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಸೃಜನಶೀಲತೆಗೆ ಅಡ್ಡಿಯಾಗಿದೆ. ವ್ಯಸನದಿಂದ ದೂರವಿಡಲು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಅಗತ್ಯವಿದೆ' ಎಂದು ಧಾರವಾಡ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಕೇಂದ್ರದ ಮುಖಸ್ಥರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರೂ ಆಗಿರುವ ಬಸವರಾಜ ನಾಲತ್ವಾಡ ಅವರು ಕಿವಿಮಾತು ಹೇಳಿದರು.
ಅವರು ರಂಗ ಸಾಮ್ರಾಟ ನಾಟಕ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಮಕ್ಕಳ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡುತ್ತಾ ಮಕ್ಕಳಿಗೆ ರಂಗ ಶಿಕ್ಷಣ ಮಾತ್ರವಲ್ಲ ನೃತ್ಯ ಸಂಗೀತ ಕಲೆಗಳು ಅಗತ್ಯವಾಗಿದ್ದು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಸವಾಂರ್ಗೀಣ ಬೆಳವಣಿಗೆ ಆಗಲಿದೆ ಎಂದರು.
ಮಕ್ಕಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತಾಡಿದ ರಂಗನಟ, ನಿರ್ದೇಶಕ ನಿವೃತ್ತ ಬ್ಯಾಂಕ್ ಅಧಿಕಾರಿ ಉಮೇಶ್ ನಾಯಕ ಅವರು ನಾಟಕ ಜೀವನದ ಅವಿಭಾಜ್ಯ ಅಂಗ, ಆ ಮೂಲಕ ಮಕ್ಕಳು ಓದದೇ ಇದ್ದರೂ ನೋಡಿ ವಿಷಯ ಅರಿಬಹುದಾಗಿದೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ರೀತಿಯಲ್ಲಿ ಮನೆಯೇ ಮೊದಲ ರಂಗಶಾಲೆ ಆಗಬೇಕಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ, ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಯವರು ಬೇಸಿಗೆ ಶಿಬಿರಗಳು ಮಕ್ಕಳಿಗೆ ಹೊಸ ಲೋಕವನ್ನೇ ಕಟ್ಡಿಕೊಡುತ್ತವೆ. ಗ್ರಾಮೀಣ ಬದುಕು, ಗ್ರಾಮೀಣ ಕ್ರೀಡೆಗಳ ಪರಿಚಯಿಸುವುದರೊಂದಿಗರ ಹಾಡು, ನೃತ್ಯ, ನಾಟಕ ಮೊದಲಾದ ಕಲೆಗಳಲ್ಲಿ ಪರಿಣತಿ ಹೊಂದುವಲ್ಲಿ ಸಹಕಾರಿ ಆಗಿದೆ. ಕಾರಣ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳಿಸುವ ಮನಸ್ಸು ಮಾಡುವುದು ಅಗತ್ಯ ಎಂದರು.
ಶಿಬಿರದ ನಿರ್ದೇಶಕ ಸಿಕಂದರ ದಂಡಿನ ಪ್ರಾಸ್ತಾವಿಕ ಮಾತಾಡಿದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ಚಿಕ್ಕಮಠ, ಪ್ರಮೀಳಾ ಜಕ್ಕಣ್ಣವರ, ಎಲ್ಲಪ್ಪ ಬೆಂಡಿಗೇರಿ, ಪ್ರಭಾವತಿ ಅಂಗಡಿ, ಇದ್ದರು
ಜಯಲಕ್ಷ್ಮಿ ಎಚ್ ನಿರೂಪಿಸಿದರು. ಮಕ್ಕಳಿಂದ ಏಸೂರು ಕೊಟ್ಟರೂ ಈಸೂರು ಬಿಡೆವು ಹಾಗೂ ನಿದ್ರಾನಗರಿ ನಾಟಕ ಪ್ರದರ್ಶನಗೊಂಡವು.