ಧಾರವಾಡ - ಹುಬ್ಬಳ್ಳಿ

‘ವ್ಯಕ್ತಿತ್ವವನ್ನು ಕಳೆದುಕೊಂಡರೆ ಮನಷ್ಯ ಬದುಕಿಯೂ ಸತ್ತಂತೆ’

‘ವ್ಯಕ್ತಿತ್ವವನ್ನು ಕಳೆದುಕೊಂಡರೆ ಮನಷ್ಯ ಬದುಕಿಯೂ ಸತ್ತಂತೆ’

ಲೋಕದರ್ಶನ ವರದಿ 

ಧಾರವಾಡ 25: ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ. ವ್ಯಕ್ತಿ ಅಳಿದರೂ ಅವರ ವ್ಯಕ್ತಿತ್ವಕ್ಕೆ ಎಂದು ಅಳಿವಿಲ್ಲ. ನಾವು ವ್ಯಕ್ತಿತ್ವವನ್ನು ಕಳೆದುಕೊಂಡರೆ ಮನಷ್ಯ ಬದುಕಿಯೂ ಸತ್ತಂತೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.  

ಅವರು ಸಂಪಿಗೆ ನಗರದ ಬಸವರಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಶಿಕ್ಷಣದಲ್ಲಿ ವ್ಯಕ್ತಿತ್ವ ವಿಕಸನದ ಮಹತ್ವ’ ಕುರಿತು ಉಪನ್ಯಾಸ ನೀಡಿದರು.  

ಮುಖ ಮತ್ತು ವೇಷಭೂಣ ನೋಡಿ ವ್ಯಕ್ತಿಗೆ ಗೌರವುದು ಸರಿ ಅಲ್ಲ. ಆ ವ್ಯಕ್ತಿಯಲ್ಲಿರುವ ವ್ಯಕ್ತಿತ್ವಕ್ಕೆ ಗೌರವ ಕೊಡಬೇಕು. ವ್ಯಕ್ತಿ ಆರಾಧನಾ ಸರಿಯಲ್ಲ. ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಪರ್ವ ಕಾಲವಿದು. ವಿದ್ಯಾರ್ಥಿಗಳು ಸಮಯ ಸದ್ಬಳಕೆ ಮಾಡಿಕೊಳ್ಳಬೇಕು. ವಿನಾಕಾರಣ ಕಾಲಹರಣ ಮಾಡಬಾರದು. ಕೀಳಿರಿಮೆ ತೊರೆದು ನಾನೂ ಏನಾದರು ಸಾಧಿಸಬಲ್ಲೆ ಎಂಬ ಛಲ ಮುಖ್ಯ. ನೀವಾಡುವ ಮಾತು ಹಿತಮಿತವಾಗಿರಬೇಕು. ಶರೀರ ಸೌಂದರ್ಯಕ್ಕಿಂತ ಹೃದಯ ಸೌಂದರ್ಯ ಬಹಳ ಮುಖ್ಯ.  

ಇನ್ನೊಬ್ಬರ ಒಳಿತಿಗಾಗಿ ಬಾಳುವ ವ್ಯಕ್ತಿ ಸಮಾಜದಲ್ಲಿ ಸದಾಕಾಲ ಸ್ಮರಣೀಯರಾಗುತ್ತಾರೆ. ಜೀವನದಲ್ಲಿ ಛಲ, ಬದ್ಧತೆ, ಬಹಳ ಮುಖ್ಯ. ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ  ವಿದ್ಯಾರ್ಥಿಗಳು ತಾಳ್ಮೆ, ಸಹನಶೀಲತೆ, ಪರೋಪಕಾರ, ಕೂಡಿ ಬಾಳುವ ಉದಾತ್ತ ಗುಣ ಬೆಳೆಸಿಕೊಳ್ಳಬೇಕು. ಹಿರಿಯರಿಗೆ ಗೌರವ ಕೊಡುವುದು ಎಷ್ಟು ಮುಖ್ಯವೋ ಅಷ್ಟೇ ಕಿರಿಯರನ್ನು ಪ್ರೀತಿಸಬೇಕು. ನೀವೂ ಬಾಳಬೇಕು ಇತರರೂ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಒಳ್ಳೆಯ ಹವ್ಯಾಸ ಬೆಳಸಿಕೊಂಡ ಈ ನಾಡಿನ ಆಸ್ತಿಯಾಗಬೇಕೆಂದರು.  

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ರಮೇಶ ಮಡಿವಾಳರ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ರಾಜು ನರೇಗಲ್ ಉಪಸ್ಥಿತರಿದ್ದು ಮಾತನಾಡಿದರು. ಗೀತಾ ರೇವಣ್ಣವರ ಸ್ವಾಗತಿಸಿ, ನಿರೂಪಿಸಿದರು. ಕಾವ್ಯಾ ಹಳ್ಳಿ ವಂದಿಸಿದರು. 


ಸುದ್ದಿ ಓದಿ