ನೇರವಾಗಿ ಚುನಾವಣಾ ಕಣಕ್ಕೆ ಬನ್ನಿ”: ಅಂಜನೇಯಲುಗೆ ಬಿಜೆಪಿ ಮುಖಂಡ ವೆಂಕಟರಮಣ ಸವಾಲು
ಬಳ್ಳಾರಿ, ಆ.25: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಸಚಿವ ಬಿ. ನಾಗೇಂದ್ರ ಅವರ ಪರ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಂಜನೇಯಲು ನೀಡಿರುವ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ನಗರದ ಸಂಗನಕಲ್ಲು ರಸ್ತೆ, ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಗರ ಅಧ್ಯಕ್ಷ ಗುರುರಾಂ ವೆಂಕಟರಮಣ, ಅಂಜನೇಯಲು ಅವರು ವೈಯಕ್ತಿಕ ಟೀಕೆ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸುವ ಬದಲು ತಮ್ಮ ವಾರ್ಡ್ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಅಂಜನೇಯಲು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವಿದ್ದರೆ ನೇರವಾಗಿ ಚುನಾವಣಾ ಕಣಕ್ಕೆ ಬಂದು ಎದುರಿಸಲಿ. ತಾವು ಸೋತರೆ ಬಳ್ಳಾರಿ ಬಿಟ್ಟು ಹೋಗುವುದಾಗಿ ವೆಂಕಟರಮಣ ಸವಾಲು ಹಾಕಿದರು.
ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ, ನುಗ್ಗುತ್ತೇವೆ ಎಂಬ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ನೀಡುವ ಬದಲು ಚುನಾವಣಾ ಪ್ರಜಾಪ್ರಭುತ್ವದ ಮೂಲಕ ತಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಅವರು ಹೇಳಿದರು.
ಅಂಜನೇಯಲು ಅವರು ಈ ರೀತಿಯ ಹೇಳಿಕೆಗಳನ್ನು ಈಗಾಗಲೇ ಎರಡು ಬಾರಿ ನೀಡಿದ್ದಾರೆ. ಪದೇಪದೇ ಅಸಂಸ್ಕೃತ ಪದಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ವೆಂಕಟರಮಣ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪ್ರತಿಭಟನೆ ನಡೆಸುವುದು ಅವರ ಹಕ್ಕಾಗಿದ್ದರೂ, ಅದರ ಹೆಸರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಅಥವಾ ಬೆದರಿಕೆ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ವ್ಯಕ್ತಪಡಿಸಬೇಕು. ವೈಯಕ್ತಿಕ ನಿಂದನೆ ಹಾಗೂ ಬೆದರಿಕೆಗಳಿಗೆ ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್ಟಿ ಮುಖಂಡರಾದ ಹೊಬಳೇಶ, ಪಾಲಣ್ಣ, ತಿಮ್ಮಪ್ಪ, ಧಾರ್ಪ ನಾಯಕ್, ಕೆ.ಎಸ್. ಅಶೋಕ್, ಮಹಿಳಾ ಘಟಕದ ಮುಖಂಡರಾದ ವಿಜಯಲಕ್ಷ್ಮೀ, ಸುಗುಣ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೊತ್ಕರ್, ಹನುಮಂತಪ್ಪ, ವೀರಣ್ಣ, ರಘು, ರಾಮಕೃಷ್ಣ, ಮಲ್ಲನಗೌಡ, ಶ್ರೀನಿವಾಸ್, ಉಮೇಶ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.