ಧಾರವಾಡ - ಹುಬ್ಬಳ್ಳಿ

"ಸರ್ವಧರ್ಮ ಸಮನ್ವಯ ಕೇಂದ್ರ : ಶ್ರೀಕ್ಷೇತ್ರ ಧರ್ಮಸ್ಥಳ" ವಿಚಾರ ಸಂಕಿರಣ

"ಸರ್ವಧರ್ಮ ಸಮನ್ವಯ ಕೇಂದ್ರ : ಶ್ರೀಕ್ಷೇತ್ರ ಧರ್ಮಸ್ಥಳ" ವಿಚಾರ ಸಂಕಿರಣ

 ಧಾರವಾಡ 16  : ಸರ್ವ ಧರ್ಮೀಯರ ಪವಿತ್ರ ಕೇಂದ್ರ, ಧರ್ಮಸ್ಥಳ ಹಲವಾರು ಸಮಾಜಮುಖಿ ಕಾರ‌್ಯಗಳನ್ನು ಮಾಡುವುದರ ಮೂಲಕ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ ಎಂದು ಖ್ಯಾತ ರಂಗಕರ್ಮಿ, ಸಾಹಿತಿ ಹಾಗೂ ಆಕಾಶವಾಣಿ ಹಿರಿಯ ಉದ್ಘೋಷಕರಾದ ಡಾ. ಶಶಿಧರ ನರೇಂದ್ರ ಹೇಳಿದರು. 

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಧಾರವಾಡ ಇವರ ಸಹಯೋಗದಲ್ಲಿ "ಸಾಹಿತ್ಯ-ಸಂಸ್ಕೃತಿ" ವಿಷಯವಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ "ಸರ್ವಧರ್ಮ ಸಮನ್ವಯ ಕೇಂದ್ರ : ಶ್ರೀಕ್ಷೇತ್ರ ಧರ್ಮಸ್ಥಳ" ಎಂಬ ವಿಷಯ ಕುರಿತು ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಒಂದು ವಿಶಿಷ್ಟ ಧರ್ಮಕ್ಷೇತ್ರವಾಗಿದ್ದು ಸುಮಾರು 800 ವರ್ಷಗಳಿಂದ ಧರ್ಮದೇವತೆಗಳು ನೆಲೆಸಿರುವ ಈ ಕ್ಷೇತ್ರದಲ್ಲಿ ಅವರ ಆಶಯದಂತೆ ಚತುರ್ದಾನಗಳಾದ ಅನ್ನದಾನ, ವಿದ್ಯಾದಾನ, ಆರೋಗ್ಯ ಮತ್ತು ಅಭಯ ದಾನಗಳ ಮೂಲಕ ಜಾತಿ ಮತ ಬೇಧವಿಲ್ಲದೆ ಸರ್ವ ಜನಾಂಗದ ಜನರ ಒಳಿತಿಗಾಗಿ ಸೇವೆ ಸಲ್ಲಿಸುತ್ತಿರುವ ಸರ್ವಧರ್ಮದ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ.  

ಮೂಲತಃ ಕುಡುಮಾ ಎಂದು ಕರೆಯಲ್ಪಡುವ ಈ ಧರ್ಮಸ್ಥಳ ಶ್ರೀಕ್ಷೇತ್ರವನ್ನು ಮುನ್ನಡೆಸುತ್ತಿರುವವರು ವಂಶಪರಂಪರೆಯ ಜೈನ ಸಮುದಾಯದ ಹೆಗ್ಗಡೆ ಮನೆಯವರು. ಈಗಿನ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದು, ಪೂಜಾ ಕೈಂಕರ್ಯಗಳು ಶೈವ ಬ್ರಾಹ್ಮಣ ಸಂಪ್ರದಾಯದವರು ನಡೆಸುತ್ತಾರೆ. ಈ ಕ್ಷೇತ್ರದ ವತಿಯಿಂದ ನಿರಂತರವಾಗಿ ಗ್ರಾಮೀಣಾಭಿವೃದ್ಧಿ,  ಶಿಕ್ಷಣ, ವೈದ್ಯಕೀಯ ಮತ್ತು ಸ್ವಯಂ ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಿದೆ. ಪ್ರಪಂಚದಲ್ಲಿಯೇ ಗಮನ ಸೆಳೆದ ಸರ್ವಧರ್ಮ ಸಮನ್ವಯ ಶಕ್ತಿ ಕೇಂದ್ರವಾಗಿದೆ ಎಂದು ಬಣ್ಣಿಸಿದರು.  

ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಧ್ಯಾಪಕಿ ಡಾ. ವೀಣಾ ಯಲಿಗಾರ ಅವರು, ಸಾಕಷ್ಟು ಬೇರೆ-ಬೇರೆ ಸಮಾಜಮುಖಿ ಕಾರ‌್ಯಗಳನ್ನ ಮಾಡುತ್ತಾ ಬಂದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮೇಲು-ಕೀಳು ಎನ್ನದೇ ಜಾತ್ಯಾತೀತವಾಗಿ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸುವಲ್ಲಿ, ಅವರನ್ನು ಆರ್ಥಿಕವಾಗಿ ಬಲಾಢ್ಯರನ್ನಾಗಿ ಮಾಡುವಲ್ಲಿ ಯಶಸ್ಸನ್ನು ಕಂಡಿದೆ ಎಂದರು. ತನುಜಾ ರೋಖಡೆ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು. 

 ಸಮಾರೋಪ ಸಮಾರಂಭದಲ್ಲಿ ಖ್ಯಾತ ಹಿರಿಯ ಸಾಹಿತಿ ಪ್ರೊ. ಕೆ. ಎಸ್ ಕೌಜಲಗಿ ಇವರು ಮಾತನಾಡಿ ಇಂಥ ಓಚಿತ್ಯಪೂರ್ಣ ಕಾರ್ಯಕ್ರಮವು ಕಾಲೇಜು ಮಟ್ಟದಲ್ಲಿ ನಡೆಯಬೇಕು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸಬೇಕೆಂದು ಸಮಾರೋಪ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತಪ್ರಸಾದ ಉಪಸ್ಥಿತರಿದ್ದರು. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯ, ಕಿಟಲ್ ಕಾಲೇಜು, ಮೃತುಂಜಯ ಕಾಲೇಜು, ಮಹಾಂತ ಕಾಲೇಜು, ಕ.ವಿ.ವಿ. ಕನ್ನಡ ಅಧ್ಯಯನ ಪೀಠ, ಜೆ.ಎಸ್‌.ಎಸ್‌. ಕಾಲೇಜಿನ ಹಾಗೂ ಜೆ.ಎಸ್‌.ಎಸ್‌. ಎಸ್‌.ಎಂ.ಐ. ಯುಜಿಪಿಜಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ‘ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ' ಎಂಬ ವಿಷಯ ಕುರಿತು ಆಯೋಜಿಸಿದ್ದ ಲೇಖನ ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. 


ಸುದ್ದಿ ಓದಿ