ಶಿಗ್ಗಾವ್

ಗೂಂಡಾ ಕೇಸ್ ದಾಖಲ್ ಮಾಡಿರುವುದನ್ನು ಖಂಡಿಸಿ ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕೆಂದು ಮನವಿ

ಗೂಂಡಾ ಕೇಸ್ ದಾಖಲ್ ಮಾಡಿರುವುದನ್ನು ಖಂಡಿಸಿ ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕೆಂದು ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 16: ಬೆಳಗಾವಿಯ ಕನ್ನಡ ಪರ ಹೋರಾಟಗಾರ ಸಂಪತಕುಮಾರ ದೇಸಾಯಿ ಅವರ ಮೇಲೆ ಗೂಂಡಾ ಕೇಸ್ ದಾಖಲ್ ಮಾಡಿರುವುದನ್ನು ಖಂಡಿಸಿ ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕರವೇ ಯುವಸೇನೆ ಕಾರ್ಯಕರ್ತರು ತಹಶೀಲ್ದಾರ ಸಂತೋಷ ಹಿರೇಮಠ ಅವರ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು. 

ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷ ಶಂಕರ ಬಡಿಗೇರ, ಕನ್ನಡ ನಾಡ ದ್ರೋಹಿಗಳಾದ ಮಹಾರಾಷ್ಟ್ರ ಸರ್ಕಾರದ ಸಚಿವರು ಪ್ರಚೋದನೆಕಾರಿ ಹೇಳಿಕೆ ನೀಡಲು ಬೆಳಗಾವಿಗೆ ಬರುವುದನ್ನು ತಡೆಯಬೇಕೆಂದು ಹೋರಾಟ ನಡೆಸಿದ  ಕನ್ನಡ ಪರ ಹೋರಾಟಗಾರ ಸಂಪತಕುಮಾರ ದೇಸಾಯಿ ಅವರ ಮೇಲೆ ಗೂಂಡಾ ಕೇಸ್ ದಾಖಲ್ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. 

ನೀವು ಮುಂಬರುವ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬೆಳಗಾವಿ ಭಾಗದ ಮರಾಠಿಗರನ್ನು ಓಲೈಸಿಕೊಳ್ಳಲು ನೀವು ಈ ರೀತಿ ಕನ್ನಡಿಗರನ್ನು ಹೆದರಿಸುವ ಪ್ರಯತ್ನ ಸಫಲವಾಗುವುದಿಲ್ಲ. ಇಂತಹ ನೂರಾರು ಕೇಸುಗಳನ್ನು ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿದರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಕನ್ನಡಿಗರನ್ನು ರಕ್ಷಣೆ ಮಾಡಬೇಕಾದ ನಮ್ಮ ಸರ್ಕಾರ ಮಹಾರಾಷ್ಟ್ರದ ಗೂಂಡಾಗಳ ಪರವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿ, ನಿಮ್ಮ ಸರ್ಕಾರಕ್ಕೆ ಮರ್ಯಾದೆ ಇದ್ದರೆ ಕೂಡಲೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆದು ನಾಡಾಭಿಮಾನವನ್ನು ಮೆರೆಯಬೇಕು. ಇಲ್ಲವಾದರೆ ಸ್ವಾಭಿಮಾನಿ ಕನ್ನಡಿಗರೆಲ್ಲ ನಾಡು, ನುಡಿ, ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಕಾಯುವ ಪಕ್ಷಕ್ಕೆ ಮತ ನೀಡುವುದರ ಮೂಲಕ ನಿಮಗೆ ತಕ್ಕಪಾಠ ಕಲಿಸುವುದರ ಜೊತೆಗೆ ನಿಮ್ಮ ಸಕರ್ಾರದ ವಿರುದ್ಧ ಚುನಾವಣಾ ಸಂದರ್ಭದಲ್ಲಿ ಜನಾಂದೋಲನಾ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

 ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಿಣಿ ಸಂತೋಷಿ ಬಡಿಗೇರ, ಜಿಲ್ಲಾ ಪ್ರಧಾನ ಸಂಚಾಲಕ ದ್ಯಾಮಣ್ಣ ಮಲ್ನಾಡದ, ತಾಲೂಕಾ ಯುವ ಘಟಕದ ಅಧ್ಯಕ್ಷ ಮಂಜು ಜವಳಗಟ್ಟಿ, ನಗರ ಅಧ್ಯಕ್ಷ ಸತೀಶ ಭಜಂತ್ರಿ, ರವಿ ಬಂಡಿವಡ್ಡರ, ಸಿದ್ದಯ್ಯ ಹಿರೇಮಠ, ಶಂಕರ ಪಾಟೀಲ, ಪ್ರವೀಣ ಬಡಿಗೇರ, ಮಾರುತಿ ಬೆಳ್ಳಿಗಟ್ಟಿ, ಓಂಕಾರ ಪಾಟೀಲ, ಕೃಷ್ಣ ಬಡಿಗೇರ, ಸೂರಜ ಮಣಕಟ್ಟಿ, ಶ್ರೀಧರ ಬಡಿಗೇರ ಸೇರಿದಂತೆ ಮುಂತಾದವರು ಹಾಜರಿದ್ದರು. 

ಸುದ್ದಿ ಓದಿ