ಸಂಕೇಶ್ವರ

ಪೊಲೀಸರು ಜನಸ್ನೇಹಿ ಮನೋಭಾವ ಹೊಂದಿದವರಾಗಿ: ಅಷ್ಟಗಿ

ಪೊಲೀಸರು ಜನಸ್ನೇಹಿ ಮನೋಭಾವ ಹೊಂದಿದವರಾಗಿ: ಅಷ್ಟಗಿ

ಹತ್ತರಗಿಃ ಪೊಲೀಸರು ತಮ್ಮ ಬಳಿ ನ್ಯಾಯ, ನೆರವು ಕೋರಿ ಬಂದವರಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ಜನಸ್ನೇಹಿ ಮನೋಭಾವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಹೇಳಿದರು. 

ಅವರು ದಿ.26ರಂದು ಯಮಕನಮರಡಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. 

ಸ್ಥಳೀಯ ಪೊಲೀಸ್ ಠಾಣೆಯು ಯಮಕನಮರಡಿಯಿಂದ ಸ್ಥಳಾಂತರಗೊಂಡು 1973ರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಥಾಪನೆಯಾಗಿದ್ದು ಈ ಠಾಣೆಯು 72 ಹಳ್ಳಿಗಳನ್ನು ಹೊಂದಿದ ಪೊಲೀಸ್ ಠಾಣೆಯಾಗಿದ್ದು ಇದರ ವ್ಯಾಪ್ತಿಗೆ ಬರುವ ರೈತಾಪಿ ವರ್ಗ, ನೇಕಾರಿಕೆ, ಕೈಗಾರಿಕೆ ಪ್ರದೇಶ ಹೊಂದಿದ್ದು ಗ್ರಾಮೀಣ ಭಾಗದ ಜನರು ಶಾಂತಿ, ನೆಮ್ಮದಿಯಿಂದ ಬದುಕಲು ಪೋಲಿಸರು ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಪೊಲೀಸ ಅಧೀಕ್ಷಕ ಡಾ. ಸಂಜೀವ ಪಾಟೀಲ ಮಾತನಾಡುತ್ತಾ ಬೆಳಗಾವಿ ಜಿಲ್ಲೆಯಲ್ಲಿ  ಒಟ್ಟು 35 ನೂತನ ಪೋಲೀಸ್ ಠಾಣೆ ಕಟ್ಟಡಗಳು ಮಂಜೂರಾಗಿದ್ದು ಈ ದಿಶೆಯಲ್ಲಿ 13 ಠಾಣೆಗಳ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆ ಮಾಡಿರುವುದು ದಾಖಲೆ ಎನಿಸಿದೆ ಎಂದು ಹೇಳಿದರು.

ಯಮಕನಮರಡಿ ಪೊಲೀಸ್ ಠಾಣೆಗೆ 1.21 ಕೋಟಿ ರೂ. ಅನುದಾನದಲ್ಲಿ 8 ತಿಂಗಳುಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಿದ್ದು ಈ ಠಾಣೆಯಲ್ಲಿ ಎರಡು ಜನ ಸಿಪಿಐ, ಎರಡು ಜನ ಪಿಐ ಗಳು ಗಣಕಯಂತ್ರ ಕೊಠಡಿ ಮೊದಲನೆ ಮಹಡಿಯಲ್ಲಿ  ಪುರುಷ ಮತ್ತು ಸ್ತ್ರಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಅಲ್ಲದೇ ಸುಸಜ್ಜಿತ ಉಗ್ರಾಣ ಕೊಠಡಿ, ನಿರ್ಮಾಣವಾಗಿದ್ದು ಇಲ್ಲಿನ ಸಿಬ್ಬಂದಿ ಉತ್ತಮ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಾ. ಸಂಜೀವ ಪಾಟೀಲ ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ, ಎಮ್. ವೇಣುಗೋಪಾಲ ಬೆಳಗಾವಿ ಎಸ್.ಪಿ.ಎ.ಆರ್. ಅಧಿಕಾರಿ ಶ್ರೀನಿವಾಸ ಯಾದವ ಬೆಳಗಾವಿ ಎಇಇ ಅಭಿಯಂತರ ವಾಸುದೇವ ಡಿ.ಎಚ್ ಹಾಗೂ ಗುತ್ತಿಗೆದಾರ ಎ.ಬಿ. ಬೀರಾದಾರ, ಗೋಕಾಕ ಡಿವೈಎಸ್ಪಿ ಹೆಚ. ಮುಲ್ಲಾ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

ಸುದ್ದಿ ಓದಿ