ಯುವಕರು ಸಂಘಟಿತರಾಗಿ ಉದ್ಯಮಗಳನ್ನು ಸ್ಥಾಪಿಸಬೇಕು: ಬಿರಾದಾರ
ಲೋಕದರ್ಶನ ವರದಿ,
ಜಮಖಂಡಿ10: ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯುವಕರು ಸಂಘಟಿತರಾಗಿ ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ವ್ಹಿಜನ್ ಕರ್ನಾಟಕ ಪೌಂಡೆಶನ್ ನಿರ್ದೇಶಕ ಆನಂದ ಬಿರಾದಾರ ಕರೆ ನೀಡಿದರು.
ನಗರದ ಮಹೇಶ ಚಿತ್ರಕಲಾ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಭಾಧ್ಯತಾ ಸಂಘಗಳ ಉದ್ಯಮ ಶೀಲತೆ ಬಾಗಲಕೋಟೆ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯುವಕರು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾದರೆ ಅವರಿಗೆ ಸರ್ಕಾರ ಎಲ್ಲ ರೀತಿಯಿಂದಲೂ ಸಹಾಯ ಸಹಕಾರ ನೀಡುವ ಯೋಜನೆ ಹಾಕಿಕೊಂಡಿದೆ ಎಂದರು.
ರೈತರ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ, ಜೇನು ಸಾಕಾಣಿಕೆ, ವಿಡಿಯೋ ಗ್ರಾಫಿ, ಬೆಲ್ಲ ತಯಾರಿಕಾ ಘಟಕ, ದ್ರಾಕ್ಷಿ, ಪ್ಯಾಕಿಂಗ್ ಸೇರಿದಂತೆ ಉದ್ಯೋಗ ಸೃಷ್ಠಿಸುವ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರ ಸಾಲ ಸೌಲಭ್ಯದ ಜೊತೆ ಎಲ್ಲ ರೀತಿಯಿಂದಲೂ ಸಹಕಾರ ಮಾರ್ಗದರ್ಶನ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ ಅದರ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು ಎಂದರು.
ಮುಂದುವರೆದ ದೇಶಗಳಲ್ಲಿ ಪ್ರತಿಯೊಬ್ಬರು ಕೈಗಾರಿಕೆ ಸೇರಿದಂತೆ ಉದ್ಯೋಗದಲ್ಲಿ ಇರುತ್ತಾರೆ. ಆ ನಿಟ್ಟಿನಲ್ಲಿ ಇಲ್ಲಿಯೂ ಕೂಡಾ ಪ್ರತಿಯೊಬ್ಬರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಮಾತನಾಡಿ, ಯಾವುದೆ ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಬಹುದು ಅದಕ್ಕೂ ಸರ್ಕಾರ ನೆರವು ನೀಡುತ್ತದೆ ಎಂದರು. ಎಸ್ಬಿಐ ಬ್ಯಾಂಕಿನ ಗಣೇಶ ದೊಡಮನಿ ಮಾತನಾಡಿದರು.
ಫೋಟೋ: ಜಮಖಂಡಿ ನಗರದ ಮಹೇಶ ಚಿತ್ರಕಲಾ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ವ್ಹಿಜನ್ ಕರ್ನಾಟಕ ಪೌಂಢೇಶನ್ ನಿರ್ದೇಶಕ ಆನಂದ ಬಿರಾದಾರ ಮಾತನಾಡುತ್ತಿರುವುದು