ಸಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ: ಕೌಜಲಗಿ
ಬೈಲಹೊಂಗಲ: ಪುರಸಭೆಯಿಂದ ಬಡ ಕುಟುಂಬಗಳಿಗೆ ಅಡುಗೆ ಅನಿಲ, ಲ್ಯಾಪ್ ಟಾಪ್ ಹಾಗೂ ಮನೆಯ ಮೇಲ್ಚಾವಣಿಗೆ ಸಹಾಯಧನ ನೀಡಲಾಗುತ್ತಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಅವರು ಶನಿವಾರ ಪುರಸಭೆ ಆವರಣದಲ್ಲಿ ಸನ್ 2020-21 ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಶೇ 24.10, ಇತರೆ ಶೇ.7.25ರ ಬಡಜನರ ಕಲ್ಯಾಣ ಕಾರ್ಯಕ್ರಮ ಅಂಗವಿಕಲರಿಗೆ ಶೇ.5 ರ ಯೋಜನೆಯಲ್ಲಿ ಸಾಮಗ್ರಿಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ಸಾರ್ವಜನಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಹಂತ ಹಂತವಾಗಿ ಬಡಜನತೆಗೆ ಸೌಲಭ್ಯ ಒದಗಿಸಲಾಗುವದು ಎಂದರು.
ಪುರಸಭೆಯ ಅಧ್ಯಕ್ಷ ಬಾಬು ಕುಡಸೋವಣ್ಣವರ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಪುರಸಭೆಯಿಂದ ಬಡ ಜನತೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ವಿರೋಧ ಪಕ್ಷದ ನಾಯಕಿ ವಾಣಿ ಪತ್ತಾರ, ಸದಸ್ಯ ಮಹೇಶ ಹರಕುಣಿ ಮಾತನಾಡಿ, ಜನತೆ ಪುರಸಭೆಯ ಯೋಜನೆಗಳ ಮಾಹಿತಿ ಪಡೆದು ಸದುಪಯೋಗಪಡೆದುಕೊಳ್ಳಬೇಕೆಂದರು.ವ್ಯವಸ್ಥಾಪಕ ಎಮ್.ಐ.ಕುಟ್ರೆ ಯೋಜನೆಗಳ ಕುರಿತು ವಿವರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಲ್ಪಾ ಗಂಗೋಳ ಮಾತನಾಡಿ ಅಂಗನವಾಡಿಗಳ ಮಾತೃಶ್ರೀ ಯೋಜನೆ ಮತ್ತು ಸ್ವ ಸಹಾಯ ಗುಂಪು ಚಟುವಟಿಕೆಗಳು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ಆರ್ಥಿಕ ಸಾಕ್ಷರತಾ ಕೇಂದ್ರ ಸಂಯೋಜಕಿ ಜಿ.ಎಸ್. ಚಿಕ್ಕಮಠ ಬ್ಯಾಂಕಿನಿಂದ ದೊರಕುವ ಸಾಲ ಸೌಲಭ್ಯ, ಸರ್ಕಾರದ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.