ಸೂತ್ರದ ಗೊಂಬೆಯಾಟ ವಿಶಿಷ್ಟವಾಗಿರುವ ಕಲೆಯಾಗಿದೆ: ಪ್ರೊ. ಭಾಸ್ಕರ್
ಲೋಕದರ್ಶನ ವರದಿ
ಶಿಗ್ಗಾವಿ 21: ಸೂತ್ರದ ಗೊಂಬೆಯಾಟ ನಮ್ಮ ನೆಲದ ಪ್ರಾಚೀನ, ಶ್ರೀಮಂತ ಮತ್ತು ಸೃಜನಶೀಲ ಕಲೆ ಅವಸಾನದತ್ತ ಹೆಜ್ಜೆ ಹಾಕುತ್ತಿದೆ. ಪ್ರದರ್ಶನಕಾರರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಮ್.ಭಾಸ್ಕರ್ ಹೇಳಿದರು
ಈ ಗೊಂಬೆಗಳನ್ನು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಪ್ರಾಯೋಗಿಕ ತರಗತಿಗಳಿಗೆ ಮತ್ತು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಬಹುಮುಖಿ ನೆಲೆಗಳಲ್ಲಿ ಬಳಸಿಕೊಳ್ಳಲಾಗುವುದು. ಸುಮಾರು 60 ವರ್ಷಗಳಿಂದ ಕಲಾವಿದರು ಈ ಗೊಂಬೆಗಳನ್ನು ಪ್ರದರ್ಶನಕ್ಕಾಗಿ ಬಳಕೆ ಮಾಡಿರುವುದು ಮತ್ತು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ. ಇವರಿಗೆ ಧನ್ಯವಾದಗಳನ್ನು ಸಲ್ಲಿಸುವೆ. ಜೊತೆಗೆ ಈ ಗೊಂಬೆಗಳನ್ನು ಮಹಾಭಾರತದ ನೀತಿಯನ್ನು ಹೇಳುವ ಬಹುಮುಖ್ಯ ಸಾಲುಗಳೊಂದಿಗೆ ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ಪ್ರದರ್ಶನಕ್ಕೆ ಇಡಲಾಗುವುದು. ಇಂತಹ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ ಕಲಾವಿದರಿಗೆ ಧನ್ಯವಾದಗಳು ಹಾಗೆಯೇ ಮಂಡಳಿಯ ಸದಸ್ಯರನ್ನು ವಿಶ್ವವಿದ್ಯಾಲಯದಿಂದ ಸನ್ಮಾನಿಸಲಾಗುವುದು ಎಂದು ಕುಲಪತಿಯವರು ತಿಳಿಸಿದರು.
ಕ್ಷೇತ್ರಕಾರ್ಯದಲ್ಲಿ ಬಾಗಿಯಾಗಿದ್ದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ.ಟಿ ಗುರುಪ್ರಸಾದ ಅವರು ಮಾತನಾಡಿ ಸೂತ್ರದ ಗೊಂಬೆಗಳು ನಮ್ಮ ಕಲಾಶ್ರೀಮಂತಿಕೆಗೆ ಕನ್ನಡಿ. ಈ ಕಲೆ ಅನೇಕ ಕಲೆಗಳಿಗೆ ಸ್ಪೂರ್ತಿಯಾಗಿದೆ. ವಿಶೇಷವಾಗಿ ಶ್ರಮಜೀವಿಗಳ ಕಲೆಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಇಂತಹ ಗೊಂಬೆಗಳನ್ನು ವಿಶ್ವವಿದ್ಯಾಲಯಕ್ಕೆ ಕೊಡುಗೆಯಾಗಿ ಕೊಡುವುದಕ್ಕೆ ಮುಂದಾಗಿರುವುದು ಸಂತಸ ತಂದಿದೆ. ನಮ್ಮ ವಿದ್ಯಾರ್ಥಿಗಳ ಕಲಿಕಾಕಾರ್ಯಕ್ಕೆ ಇವು ಸಹಕಾರಿ ಆಗಲಿವೆ. ಹಾಗಾಗಿ ಮಂಡಳಿಯ ಸರ್ವ ಸದಸ್ಯರಿಗೆ ಧನ್ಯವಾದಗಳು ಎಂದರು.
ವಿಶ್ವವಿದ್ಯಾಲಯದ ಜನಪದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಹಾಗೂ ಡಾ ನಾಗರಾಜ ಎಸ್ ಅವರು ಮತ್ತು ಸದಸ್ಯರಾದ ಬಿ ನಿಂಗಪ್ಪ, ಮಹೇಶ್ವರಪ್ಪ, ಕೆ ಬಸಪ್ಪ, ಬಿ. ಆರ್ ವೀರಣ್ಣ ಅವರು ಉಪಸ್ಥಿತರಿದ್ದರು