ಮನರಂಜನೆ

ಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನ

ಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನ

ಹೊಸದಿಲ್ಲಿ : ಜನೆವರಿ 17  ಖ್ಯಾತ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿರ್ಜು ಮಹಾರಾಜ್ (83) ಮಧ್ಯರಾತ್ರಿ ದೆಹಲಿಯ ಸಾಕೇತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಕಿ ಮಾಲಿನಿ ಅವಸ್ತಿ ಮತ್ತು ಅದ್ನಾನ್ ಸಾಮಿ ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬಿಜು ಜಿ ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎಂದು ಬಿರ್ಜು ಮಹಾರಾಜ್ ಅವರ ಮೊಮ್ಮಗಳು ರಾಗಿಣಿ ತಿಳಿಸಿದ್ದಾರೆ. ಕಳೆದ ರಾತ್ರಿ 12.15-12.30 ರ ಸುಮಾರಿಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಪ್ರಾಣ ಉಳಿಯಲಿಲ್ಲ.
ಶ್ರೇಷ್ಠ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಜಿ ಅವರ ನಿಧನದ ಸುದ್ದಿಯಿಂದ ತೀವ್ರ ದುಃಖವಾಗಿದೆ. ಕಲಾ ಕ್ಷೇತ್ರದಲ್ಲಿ ಒಬ್ಬ ವಿಶಿಷ್ಟ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಬಿರ್ಜು ಅವರು ತಮ್ಮ ಪ್ರತಿಭೆ ಮೂಲಕ ಕಲಾ ಪ್ರೇಮಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಬಾಲಿವುಡ್ ಗಾಯಕ ಅದ್ನಾನ್ ಸಾಮಿ ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಲಕ್ನೋ ಘರಾನಾಗೆ ಸೇರಿದ ಬಿರ್ಜು ಮಹಾರಾಜ್, 1938 ಫೆಬ್ರವರಿ 4ರಂದು ಲಕ್ನೋದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಪಂಡಿತ್ ಬ್ರಿಜ್ಮೋಹನ್ ಮಿಶ್ರಾ. ಕಥಕ್ ನೃತ್ಯಗಾರನಲ್ಲದೆ, ಅವರು ಶಾಸ್ತ್ರೀಯ ಗಾಯಕರೂ ಸಹ ಆಗಿದ್ದರು. ಬಿರ್ಜು ಮಹಾರಾಜರ ತಂದೆ ಅಚ್ಚನ್ ಮಹಾರಾಜ್, ಚಿಕ್ಕಪ್ಪ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಕೂಡ ಪ್ರಸಿದ್ಧ ಕಥಕ್ ನೃತ್ಯಗಾರರಾಗಿದ್ದರು.
ಬಿರ್ಜು ಮಹಾರಾಜ್ ಅವರು ದೇವದಾಸ್, ದೇದ್ ಇಷ್ಕಿಯಾ, ಉಮ್ರಾವ್ ಜಾನ್ ಮತ್ತು ಬಾಜಿ ರಾವ್ ಮಸ್ತಾನಿ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಇದಲ್ಲದೆ ಸತ್ಯಜಿತ್ ರೇ ಅವರ ‘ಶತ್ರಂಜ್ ಕೆ ಖಿಲಾಡಿ’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಬಿರ್ಜು ಮಹಾರಾಜ್ ಅವರಿಗೆ 1983 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಳಿದಾಸ್ ಸಮ್ಮಾನ್ ಕೊಡ ಮಾಡುವುದರ ಮೂಲಕ ಗೌರವಿಸಲಾಗಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಮತ್ತು ಖೈರಗಢ ವಿಶ್ವವಿದ್ಯಾನಿಲಯಗಳು ಬಿರ್ಜು ಮಹಾರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.
ವಿಶ್ವರೂಪಂ ಚಿತ್ರದಲ್ಲಿನ ನೃತ್ಯ ಸಂಯೋಜನೆಗಾಗಿ ಅವರಿಗೆ 2012 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ಬಾಜಿರಾವ್ ಮಸ್ತಾನಿಯ “ಮೋಹೆ ರಂಗ್ ದೋ ಲಾಲ್” ನೃತ್ಯ ಸಂಯೋಜನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು 2016 ರಲ್ಲಿ ಬಿರ್ಜು ಮಹಾರಾಜ್ ಪಡೆದುಕೊಂಡಿದ್ದಾರೆ.

ಸುದ್ದಿ ಓದಿ