ಮನರಂಜನೆ

ಫೇಸ್‌ಬುಕ್‌ನಲ್ಲಿ ಲೈವ್ ಬಂದು ಆತ್ಮಹತ್ಯೆಗೆ ಶರಣಾದ ನಟಿ ಅನುಪಮಾ ಪಾಠಕ್

ಫೇಸ್‌ಬುಕ್‌ನಲ್ಲಿ ಲೈವ್ ಬಂದು ಆತ್ಮಹತ್ಯೆಗೆ ಶರಣಾದ ನಟಿ ಅನುಪಮಾ ಪಾಠಕ್

ಮುಂಬೈ, ಆಗುಸ್ಟ್ 07: ಭೋಜಪುರಿ ಚಿತ್ರರಂಗದ ನಟಿ ಅನುಪಮಾ ಪಾಠಕ್, ಮುಂಬೈನ ದಹಿಸಾರ್‌ನಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ 2ರಂದೇ ಅವರು ಆತ್ಮಹತ್ಯೆಗೆ ಶರಣಾಗಿದ್ದು,  ಘಟನೆ ತಡವಾಗಿ ವರದಿಯಾಗಿದೆ. ಸಾಯುವ ಒಂದು ದಿನ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಅನುಪಮಾ, ತಾವು ವಂಚನೆಗೆ ಒಳಗಾಗಿದ್ದು, ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿಕೊಂಡಿದ್ದಾರೆ.

 ನೀವು ಯಾರನ್ನಾದರೂ ನಂಬಿಕೊಂಡಿದ್ದರೆ, ನೀವು ಕೆಲವು ಸಮಸ್ಯೆಗಳಿಗೆ ಒಳಗಾಗಿದ್ದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿಸುತ್ತಿದ್ದರೆ, ಆ ವ್ಯಕ್ತಿ ಎಷ್ಟೇ ಒಳ್ಳೆಯ ಸ್ನೇಹಿತರಿರಲಿ ನಿನ್ನ ಸಮಸ್ಯೆಗಳಿಂದ ದೂರ ಇರು ಎಂದು ಕೂಡಲೇ ಹೇಳುತ್ತಾರೆ. ಏಕೆಂದರೆ ನೀವು ಸತ್ತ ಬಳಿಕ ಅವರು ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ.

 ಹಾಗೆಯೇ ಜನರು ನಿಮ್ಮ ಬಗ್ಗೆ ಬೇರೆಯವರ ಎದುರು ತಮಾಷೆ ಮಾಡುತ್ತಾರೆ ಮತ್ತು ಅಗೌರವದಿಂದ ಮಾತನಾಡುತ್ತಾರೆ. ಹೀಗಾಗಿ ಯಾರೊಂದಿಗೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಡಿ ಮತ್ತು ಯಾರನ್ನೇ ಆದರೂ ನಿಮ್ಮ ಸ್ನೇಹಿತರು ಎಂದು ಪರಿಗಣಿಸಬೇಡಿ ಎಂದು ಅವರು ಫೇಸ್ ಬುಕ್ ಲೈವ್‌ನಲ್ಲಿ ಅಲವತ್ತುಕೊಂಡಿದ್ದಾರೆ. 

ಮಾನಸಿಕ ಒತ್ತಡ, ಪ್ರೇಮವೈಫಲ್ಯ, ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಜೀವ ಕಳೆದುಕೊಳ್ಳುವ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿರುವುದು ಮನರಂಜನಾ ವಲಯದಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಅವರ ಮೃತದೇಹ ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಹಣ ವಾಪಸ್ ಬಂದಿಲ್ಲ.  ಅವಧಿ ಮುಗಿದಿದ್ದರೂ ಕಂಪನಿ ಹಣ ಪಾವತಿಸಿಲ್ಲ ಎಂದು 40 ವರ್ಷ ವಯಸ್ಸಿನ ನಟಿ ಅನುಪಮಾ ಪಾಠಕ್ ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.  

ಬಿಹಾರದ ಪೂರ್ನಿಯಾ ಜಿಲ್ಲೆಯವರಾದ ಈಕೆ ಚಲನಚಿತ್ರ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನೆಲೆಸಿದ್ದರು ಎನ್ನಲಾಗಿದೆ.


ಸುದ್ದಿ ಓದಿ