ಯುವಕರೇ ಈ ದೇಶದ ಆಸ್ತಿ: ಗುಂಜುಟಗಿ
ರಾಣೇಬೆನ್ನೂರ,20: ಯುವಕರೇ ಈ ದೇಶದ ಆಸ್ತಿ ಹಾಗೂ ಸಂಪತ್ತಾಗಿದ್ದು, ದೇಶದ ಅಳಿವು ಉಳಿವು ಅವರ ಕೈಯಲ್ಲಿದೆ. ಸರ್ವರಲ್ಲೂ ದೇಶದ ಬಗ್ಗೆ ಅಭಿಮಾನ ಮೂಡಬೇಕು. ಕಾಯಾ, ವಾಚಾ, ಮನಸಾದಿಂದ ದೇಶ ಸೇವೆ ಮಾಡುವಂತಾಗಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದಾಗಿದ್ದು, ಧ್ವಜದ , ಸ್ವಾತಂತ್ರ್ಯದ, ಸಂವಿಧಾನದ ಮಹತ್ವ, ಜವಾಬ್ದಾರಿ ಹಕ್ಕುಗಳನ್ನು ನಾವುಗಳೆಲ್ಲರೂ ಪರಿಪಾಲಿಸಬೇಕಾಗಿದೆ. ಹೀಗೆ ಮಾಡಿದರೆ ಭಾರತಮಾತೆಯ ಋಣ ನಾವೆಲ್ಲರೂ ತೀರಿಸಿದಂತಾಗುತ್ತದೆ ಎಂದು ಗುಂಜುಟಗಿ ಹೇಳಿದರು .
ಸ್ಥಳೀಯ ಮಾರುತಿ ನಗರದ ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಬುಧವಾರದಂದು ನಗರದಲ್ಲಿಭಾರತ ಮಾತಾ ಮೆರವಣಿಗೆ, ರಾಷ್ಟ್ರಭಕ್ತಿ ಪುನರ್‌ಜಾಗೃತಿ ಸಮಾವೇಶವು ಅದ್ದೂರಿ ಹಾಗೂ ಬಹು ವಿಜ್ರಂಭಣೆಯಿಂದ ನೆರವೇರಿತು. ನಗರದ ಶಿಡ್ಲು ಪತ್ರಿಕೆ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆಗೆ ಶಹರ ಪಿಎಸ್ ಐ ಗಡ್ಡೆಪ್ಪ ಗುಂಜುಟಗಿ ಭಾರತಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಹುತೇಕ ಯುವಕರಲ್ಲಿ ಹೆಚ್ಚುತ್ತಿರುವ ವಿದೇಶಿ ವ್ಯಾಮೋಹ, ತಂತ್ರಜ್ಞಾನ, ಸಾಮಾಜಿಕ ಜಾಲತಾಣದಿಂದಾಗಿ ಇಂದು ದೇಶಾಭಿಮಾನ, ರಾಷ್ಟ್ರಭಕ್ತಿ, ಸಾಮಾಜಿಕ ಕಳಕಳಿ, ಗುರುಹಿರಿಯರ ಮೇಲಿನ ಕಾಳಜಿ ಕ್ಷೀಣಿಸುತ್ತಿದೆ ಎಂದರು.
ಭಾರತ್ ಮಾತಾ ಮೆರವಣಿಗೆಯು ದುರ್ಗಾ ವೃತ್ತ, ಎಂಜಿ ರಸ್ತೆ, ಅಂಚೆ ವೃತ್ತ, ಬಿಎಸ್ ರೋಡ್, ಮೆಡ್ಲೇರಿ ಕ್ರಾಸ್, ಬಸ್ ನಿಲ್ದಾಣ, ಹಲಗೇರಿ ಕ್ರಾಸ್, ಕುರುಬರ ಕ್ರಾಸ್, ಪಿಬಿ ರಸ್ತೆ ಮೂಲಕ ಮಾರುತಿ ನಗರದಲ್ಲಿರುವ ಭಾರತ್ ಮಾತಾ ಮಂದಿರಕ್ಕೆ ಮೆರವಣಿಗೆಯು ತಲುಪಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪುರವಂತಿಕೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಾರತ ಮಾತಾ ಮೆರವಣಿಗೆಗೆ ಮೆರಗು ತಂದರು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡು ಜೈಹಿಂದ ಜಯಘೋಷದ ಮೂಲಕ ಅಭಿಮಾನ ಮೂಡಿಸಿದರು.
ಸಮಿತಿಯ ಅಧ್ಯಕ್ಷ ಹಾಗೂ ಪತ್ರಕರ್ತ ಎಸ್. ಜಿ. ಮಹಾನುಭಾವಿಮಠ, ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ಆರಿ್ಜ. ಮಹಾನುಭಾವಿಮಠ, , ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಗೌಡ ಶಿವಣ್ಣನವರ್,ಶೇಖಪ್ಪ ಹೊಸಗೌಡ್ರ,ಕೊಟ್ರೇಶಪ್ಪ ಎಮ್ಮಿ, ಎಚ್.ಎಸ್. ಪಾಟೀಲ್, ಚಂದ್ರ್ಪ, ಕುಮಾರಸ್ವಾಮಿ ಮಹಾನುಭಾವಿಮಠ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಯ ಮುಖಂಡರುಗಳು ಇದ್ದರು.
ಆನಂತರ ಭಾರತಮಾತಾ ಮಂದಿರದ ಆವರಣದಲ್ಲಿ ಸಂಜೆ ಭಾರತಮಾತೆಗೆ ಪೂಜೆ- ರಾಷ್ಟ್ರ ಭಕ್ತಿ ಪುನರ್ ಜಾಗೃತಿ ಸಮಾವೇಶವು ನೆರವೇರಿತು. ಆನಂತರ ಮಾಜಿ ಸೈನಿಕರಿಗೆ , ಸೇವಾನಿರತರಿಗೆ ಸನ್ಮಾನ ಜರುಗಿದವು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಿಸಿದವು. ಅಲ್ಲದೆ ಜನನಿ ಜಾನಪದ ಕಲಾ ತಂಡದ, ಕಲಾ ನಿರ್ದೇಶಕ ಡಾಕ್ಟರ್ ಕೆ..ಸಿ. ನಾಗರಜ್ಜಿ, ಪರಶುರಾಮ ಬಣಕಾರ, ಕೆ.ಎಸ್. ನಾಗರಾಜ್, ವೀಣಾ ಬೋಸ್ಲೆ, ಅನುಸೂಯ ರಾಠೋಡ್, ರಾಜು ಸುರ್ವೆ ಸಂಗಡಿಗರ ಕನ್ನಡ ಸಂಸ್ಕೃತಿ ಬಿಂಬಿತ ಜಾನಪದ ಕಾರ್ಯಕ್ರಮವು ಪ್ರೇಕ್ಷಕರ ಗಮನ ಸೆಳೆದವು. ವೀಣಾ ಕಾಮಟೆ ಪ್ರಾರ್ಥಿಸಿದರು. ಬಿ.ಎಸ್. ಅಜ್ಮನಿ ಸ್ವಾಗತಿಸಿ, ಶಿವಯೋಗಿ ಮಹಾನುಭಾವಿ ಮಠ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ: ಹೆಚ್.ಎಂ. ದೊಡ್ಡಬಿಲ್ಲ ನಿರೂಪಿಸಿ, ಪತ್ರಕರ್ತ ಕೆ.ಎಸ್. ನಾಗರಾಜ್, ವಂದಿಸಿದರು.