ಯುವ ನಾಯಕ ಪ್ರಕಾಶ ಕೋಳಿವಾಡ ಹುಟ್ಟುಹಬ್ಬ: ಸಾಮಾಜಿಕ ಸೇವೆಗಳ ಲೋಕಾರ್ಪಣೆ
ರಾಣೀಬೆನ್ನೂರ 01: ಸಮಾಜದಲ್ಲಿ ಎಲ್ಲರೂ ಶ್ರೀಮಂತರಲ್ಲ ಎಲ್ಲರೂ ಬಡವರೂ ಅಲ್ಲ ಆದರೆ ದಿನ ನಿತ್ಯವೂ ಆರ್ಥಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಅಧಿಕವಾಗುತ್ತಲಿದೆ. ಇಂತಹ ಸಂದರ್ಭದಲ್ಲಿ ಅಲ್ಲಲ್ಲಿ ಜನ ಪರ ಸೇವೆ ಮಾಡುವ ಸಂಘ-ಸಂಸ್ಥೆಗಳು ಸಾಮಾಜಿಕ ಚಿಂತಕರು ಇರುವುದರಿಂದ ಕೆಲವರ ಸಮಸ್ಯೆಗಳಾದರೂ ಪರಿಹಾರ ಕಾಣಲು ಸಾಧ್ಯವಾಗುತ್ತಲಿದೆ. ಆಂತವರ ಸಾಲಿನಲ್ಲಿ ಬಹು ದೊಡ್ಡ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಚಿಂತನೆ ಇಟ್ಟುಕೊಂಡು ಕಳೆದ 5 ವರ್ಷಗಳಿಂದ ಹಿಂದೆ ಪ್ರಾರಂಭವಾಗಿರುವ ಪಿಕೆಕೆ ಇನಿಷಿಯೇಟಿವ್ ಸ್ಥಾಪಕರಾದ ಪ್ರಕಾಶ ಕೋಳಿವಾಡ ಅವರ ಸೇವೆ ಅಮೋಘವಾಗಿದೆ ಎಂದು ನಗರಸಭಾ ಸದಸ್ಯ ಪಿ ಜೆ ಮರಿಯಮ್ಮನವರ ಹೇಳಿದರು.
ಅವರು ಗುರುವಾರ ವಾಗೀಶ ನಗರದ ಕೆ.ಬಿ. ಕೋಳಿವಾಡ ಸಭಾ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಸಮಾಜ ಸೇವೆಗಳ ಲೋಕಾರೆ್ಣ ಕುರಿತು ಮಾತನಾಡಿದರು. ಇದೇ ಏಪ್ರೀಲ್ 5 ರಂದು ಯುವ ನಾಯಕ ಪ್ರಕಾಶ ಕೋಳಿವಾಡ ಅವರು ಹುಟ್ಟುಹಬ್ಬ ಇದೆ. ಅವರು ತಮ್ಮ ಜೀವನದುದ್ದಕ್ಕೂ ಜನಪರ ಕಾಳಜಿ ಹೊಂದಿ ಯುವಕರ ಸ್ವಾವಲಂಬಿ ಬದುಕಿಗಾಗಿ ಮೊದಲ ಬಾರಿಗೆ ಉದ್ಯೋಗ ಮೇಳ ಆಯೋಜಿಸಿ ಹತ್ತಾರು ಸಾವಿರ ಯುವಕರಿಗೆ ಉದ್ಯೋಗ ದೊರಕಿಸಿ ಕೊಟ್ಟವರಾಗಿದ್ದಾರೆ. ಅಲ್ಲದೇ ಸಮಾಜದಲ್ಲಿರುವ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ತಮ್ಮ ಸಂಸ್ಥೆಯ ಮೂಲಕ ಬಹು ದೊಡ್ಡ ಅಭಿಮಾನಿ ಬಳಗ ಕಟ್ಟಿಕೊಂಡು ನಿರಂತರ ಸೇವಾ ಕಾರ್ಯ ನಡೆಸುತ್ತಿದ್ದಾರೆ. ಇದೀಗ ತಾಲೂಕಿನ 60 ಹಳ್ಳಿಗಳಲ್ಲಿ ಸಂಚಾರಿ ಆಸ್ಪತ್ರೆ ಮೂಲಕ ಉಚಿತ ಆರೋಗ್ಯಸೇವೆ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆರೋಗ್ಯ ತಪಾಸಣೆ ಅವಶ್ಯವಿದ್ದವರಿಗೆ ಉಚಿತ ಶಸ್ತ್ರ ಚಿಕಿತ್ಸೆ, ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇದರ ಪ್ರಯೋಜನವನ್ನು ಪಡೆಯಲು ಪ್ರತಿಯೊಬ್ಬ ನಾಗರೀಕರು ಮುಂದಾಗಬೇಕು ಎಂದರು.
ಪಿಕೆಕೆ ಇನಿಷಿಯೇಟಿವ್ ಸ್ಥಾಪಕ ಪ್ರಕಾಶ ಕೋಳಿವಾಡ ಅವರು ಮಾತನಾಡಿ ಅಭಿಮಾನಿಗಳ ಪ್ರೀತಿ ವಿಶ್ವಾಸ ಮತ್ತು ಅವರ ಅಭಿಮಾನವನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ ತಾವು ಪ್ರತಿ ವರ್ಷ ಆಚರಿಸಿಕೊಳ್ಳುತ್ತಿರುವ ತಮ್ಮ ಹುಟ್ಟು ಹಬ್ಬವನ್ನು ಜನ-ಸಾಮಾನ್ಯರ ಸೇವೆಯ ಮೂಲಕ ನಡೆಯುತ್ತದೆ. ಪ್ರತಿ ವರ್ಷವೂ ಒಂದೊಂದು ಹೊಸ ಯೋಜನೆಯನ್ನು ರೂಪಿಸಲು ಅಭಿಮಾನಿ ಬಳಗ ನಿರ್ಧರಿಸಿದೆ. ಈ ಬಾರಿ ಹಲವು ಹೊಸ ಯೋಜನೆಗಳ ಜೊತೆಗೆ ಬಡವರ, ದೀನ-ದಲಿತರ, ಅಂಧರ, ಆಟೋ ಚಾಲಕರ, ಕಟ್ಟಡ ಕಾರ್ಮಿಕರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ತಮ್ಮ ಸಂಸ್ಥೆಯ ಸೇವಾ ಯೋಜನೆಗಳ ಕುರಿತು ಸಾಧ್ಯಾಂತವಾಗಿ ಮಾತನಾಡಿದರು.
ಮಾದ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶೇಖಪ್ಪ ಹೊಸಗೌಡ್ರ, ಬಸನಗೌಡ ಮರದ, ಮೃತ್ಯುಂಜಯ ಸುರಳಿಕೇರಿಮಠ, ಇರ್ಫಾನ್ ದಿಡಗೂರ, ಲಿಂಗರಾಜ ಕೋಡಿಹಳ್ಳಿ, ರಮೇಶ ಬಿಸಲಹಳ್ಳಿ, ಶಶಿಧರ ಬಸೇನಾಯ್ಕರ, ಮಂಜನಗೌಡ ಪಾಟೀಲ, ರಾಜು ರಾಧಮ್ಮನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.