ಬೈಲಹೊಂಗಲ

ಉತ್ತಮ ಆರೋಗ್ಯಕ್ಕಾಗಿ ಯೋಗ ಅವಶ್ಯಕ: ಅಂಗಡಿ

ಉತ್ತಮ ಆರೋಗ್ಯಕ್ಕಾಗಿ ಯೋಗ ಅವಶ್ಯಕ: ಅಂಗಡಿ
ಪಟ್ಟಣದ ಪತ್ರಿಬಸವನಗರದ 1 ನೇ ಕ್ರಾಸ್ ಸಭಾಭವನದಲ್ಲಿ ಹಮ್ಮಿಕೊಂಡ ನಿರಂತರ ಯೋಗ ದಾಸೋಹ ಕಾರ್ಯಕ್ರಮಕ್ಕೆ ಚಿಕ್ಕಮಕ್ಕಳ ತಜ್ಞ

ಬೈಲಹೊಂಗಲ 23: ಇಂದಿನ ಸಂಸಾರದ ಜಂಜಾಟದಲ್ಲಿರುವ ಮನುಷ್ಯ  ಹಣ, ಅಧಿಕಾರ, ಅಂತಸ್ತು, ಭೋಗ ಭಾಗ್ಯ, ಸಿರಿ ಸಂಪತ್ತು ಬೆನ್ನು ಬಿದ್ದು ತನ್ನ ಅಮೂಲ್ಯವಾದ ಆರೋಗ್ಯವನ್ನು ಹಾಳು ಮಾಡಿಕೊಂಡು, ಇಂದು ಸಾವಿರಾರು ರೂ ಆಸ್ಪತ್ರೆಗೆ ವೆಚ್ಚಮಾಡಿ, ಆರ್ಥಿಕ ಮುಗ್ಗಟ್ಟು ಪರಿಸ್ಥಿತಿ ಎದುರಿಸುವಂತಾಗಿದೆ ಎಂದು  ಚಿಕ್ಕಮಕ್ಕಳ ತಜ್ಞ ಡಾ. ಶರಣಕುಮಾರ ಅಂಗಡಿ  ಹೇಳಿದರು. 

ಅವರು ಭಾನುವಾರ ಪಟ್ಟಣದ ಪತ್ರಿಬಸವನಗರದ 1 ನೇ ಕ್ರಾಸ್ ಸಭಾಭವನದಲ್ಲಿ ಹಮ್ಮಿಕೊಂಡ ನಿರಂತರ ಯೋಗ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,  ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಮನಶಾಂತಿ, ಸದೃಢ ಬದುಕು, ಒಳ್ಳೆಯ ಕೌಟುಂಬಿಕ ಜೀವನ ಮತ್ತು ಧರ್ಮ ಮಾರ್ಗಕ್ಕಾಗಿ ಯೋಗದಲ್ಲಿ ತೊಡಗುವದು ಅವಶ್ಯವಾಗಿದೆ ಎಂದರು.

ಆಹಾರ ಪದ್ಧತಿ, ಜೀವನ ಶೈಲಿ, ರೋಗ ರುಜಿನಗಳಿಂದ ಮುಕ್ತಿ ಪಡೆಯುವ ಬಗ್ಗೆ ಇಂದಿನಿಂದ  ಮೂರುದಿನಗಳ ಕಾಲ ವಿಶೇಷ ಉಚಿತ ಕಾರ್ಯಾಗಾರ ಶಿಬಿರ, ನಂತರ ಯೋಗಾಭ್ಯಾಸ ತರಬೇತಿಯ ಯೋಗ ದಾಸೋಹ ನಿತ್ಯ ನಡೆಯಲಿದ್ದು, ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವದರಿಂದ ಬಿ.ಪಿ, ಶುಗರ್, ಬೊಜ್ಜು, ಸಂದಿವಾತ, ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಸುವ ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಎಲ್ಲ ವಯೋಮಾನದವರಿಗೆ ಸಿಗುವದು ನಿಶ್ಚಿತವೆಂದರಲ್ಲದೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಜನತೆಯ ಆರೋಗ್ಯದ ದೂರ ಹಿತದೃಷ್ಠಿಯಿಂದ ಸಂಗಮೇಶ ಸವದತ್ತಿಮಠ ಅವರು ಜನತೆಗೆ ನಿತ್ಯ ಯೋಗ ದಾಸೋಹ ಹಮ್ಮಿಕೊಂಡಿರುವ ಕಾರ್ಯ ಅಮೋಘವಾಗಿದೆ.

ವೇದಿಕೆಯ ಮೇಲೆ  ಯೋಗ ಗುರು ಡಾ. ಸಂಗಮೇಶ ಸವದತ್ತಿಮಠ,ಕಸಾಪ ಮಾಜಿ ತಾಲೂಕಾಧ್ಯಕ್ಷ ಈಶ್ವರ ಹೋಟಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಡಾ.ಅಶೋಕ ದೊಡವಾಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ನಾಗರೀಕರು ಇದ್ದರು.

ಸುದ್ದಿ ಓದಿ