ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ: ನ್ಯಾ.ಪುಷ್ಪಾಂಜಲಿ ದೇವಿ
ಬಳ್ಳಾರಿ 21 : ವ್ಯಕ್ತಿಯ ಸರ್ವ ಅಂಗಗಳೂ ಕೂಡ ಯೋಗಾಸನದಿದಂದ ಕ್ರಿಯಾಶೀಲಗೊಂಡು, ಆರೋಗ್ಯ ಮಟ್ಟವನ್ನು ವೃದ್ಧಿಸುತ್ತದೆ. ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಸಹಕಾರಿಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಸಹಯೋಗದಲ್ಲಿ “ವಸುದೈವ ಕುಟುಂಬಕ್ಕಾಗಿ ಯೋಗ’ ಧ್ಯೇಯವ್ಯಾಕ್ಯದೊಂದಿಗೆ ಬುಧವಾರದಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 9ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರತಿ ದಿನ ಯೋಗಭ್ಯಾಸ ಮಾಡುವುದನ್ನು ರೂಢಿಸಿಕೊಂಡು ಆರೋಗ್ಯವಂತರಾಗಿ ಬಾಳುವಂತೆ ಕರೆ ನೀಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪಿ.ರಾಮಬ್ರಹ್ಮಂ ಅವರು ಮಾತನಾಡಿ, ವಕೀಲರು ಒಂದು ಗಂಟೆಗಳ ಕಾಲಾವಕಾಶ ಯೋಗಭ್ಯಾಸಕ್ಕೆ ಮೀಸಲಿಟ್ಟರೆ ದಿನದ 23 ತಾಸು ಅದು ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳಿದ ಅವರು, ಈ ಇದೇ ಸಂದರ್ಭದಲ್ಲಿ ಯೋಗಾಭ್ಯಾಸದ ಮಹತ್ವ ತಿಳಿಸುತ್ತಾ, ತಮ್ಮ ಸಮಿತಿ ಸದಸ್ಯರೊಂದಿಗೆ ಹಲವು ಯೋಗಾಸನಗಳ ಮೂಲಕ ನೆಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಳ್ಳಾರಿ ನಗರದ ಎಲ್ಲಾ ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷರಾದ ಕೆ.ಯರೇಗೌಡ ಮತ್ತು ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ್ ಸೇರಿದಂತೆ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
----
ಬಳ್ಳಾರಿ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ ಜೂ.27ರಂದು
ಬಳ್ಳಾರಿ 21 : ಬಳ್ಳಾರಿ ಜಿಲ್ಲಾ ಪಂಚಾಯಿತಿಯ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಕಿ ಅಂಶ ಸೇರಿದಂತೆ) ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ನ ನಜೀರ್ ಸಭಾಂಗಣದಲ್ಲಿ ಜೂ.27 ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ.
ಸದರಿ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳ (ವಾರ್ಷಿಕ) ಕೆಡಿಪಿ ತ್ರೈಮಾಸಿಕ ಆರ್ಥಿಕ ಮತ್ತು ಭೌತಿಕ ವಿವರಗಳ ಪ್ರಗತಿ ವರದಿಯೊಂದಿಗೆ ಖುದ್ದಾಗಿ ನಿಗದಿಪಡಿಸಿದ ಸಮಯದೊಳಗೆ ಹಾಜರಾಗಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ.
------
ಯೋಗದಿಂದ ಆರೋಗ್ಯದ ರಕ್ಷಣೆ ಸಾಧ್ಯ: ಪಂಪಾಪತಿ
ಬಳ್ಳಾರಿ 21 : ನಿರಂತರ ಯೋಗ ಮತ್ತು ಪ್ರಾಣಾಯಾಮದಿಂದ ಆರೋಗ್ಯದ ಪರಿಯನ್ನು ರಕ್ಷಿಸಿಕೊಳ್ಳಬಹುದು ಪತಂಜಲಿ ಯೋಗಕೇಂದ್ರದ ಯೋಗ ಪಟು ಪಂಪಾಪತಿ ಅವರು ಹೇಳಿದರು .
ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭಾರತಿ ಮತ್ತು ವಿವೇಕಾನಂದ ಪ್ರೌಢಶಾಲೆಗಳ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 09 ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾರಕ ರೋಗಗಳಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಪ್ರಾಣಾಯಾಮ ಬಹಳ ಉಪಯುಕ್ತ ಎಂದರು. ಮಹಾನಗರ ಪಾಲಿಕೆ ಸದಸ್ಯ ಸುರೇಖಾ ಮಲ್ಲನಗೌಡ ಅವರು ಮಾತನಾಡಿ, ಯೋಗಾಸನದ ಅಭ್ಯಾಸ ಎಂಬುದು ನಮ್ಮ ಜೀವನದ ಚಟುವಟಿಕೆಗಳಲ್ಲಿ ಒಂದಾದರೆ ಮಾತ್ರ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹೈದರಾಬಾದಿನ ದೂರದರ್ಶನ ಕೇಂದ್ರದ ನಿವೃತ್ತ ಉಪನಿರ್ದೇಶಕ ಡಾ.ಕೆ.ಸುಧಾಕರ್ ರಾವ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಎನ್.ರಾಮಕೃಷ್ಣ, ಬಾಲ ಭಾರತಿ ಹಾಗೂ ವಿವೇಕಾನಂದ ಪ್ರೌಢಶಾಲೆಯ ಪ್ರಾಂಶುಪಾಲರಾದ ಪಲ್ಲವಿ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಏರಿ್ಡಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೇಂದ್ರ ಸಂವಹನ ಇಲಾಖೆಯಿಂದ ಭಾಗವಹಿಸಿದ ಗಣ್ಯರಿಂದ ಬಹುಮಾನ ವಿತರಿಸಲಾಯಿತು .
ಶಾಲಾ ಮಕ್ಕಳಿಂದ ಸೂರ್ಯ ನಮಸ್ಕಾರದ ಪ್ರಾತ್ಯಕ್ಷತೆ ನಡೆಯಿತು.
-------
ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ 21 : 2023-24 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ವಾಸವಾಗಿರುವ ಹಿಂದುಳಿದ ವರ್ಗಗಳ ವಸತಿ ರಹಿತ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಳ್ಳಾರಿ, ಸಿರುಗುಪ್ಪ ಮತ್ತು ಸಂಡೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಜುಲೈ 05 ರೊಳಗಾಗಿ ಸಲ್ಲಿಸಬೇಕು.
*ನಿಬಂಧನೆಗಳು:*
ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರೆಂದು ಗುರುತಿಸಲ್ಪಟ್ಟಿರಬೇಕು. ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡಲಾಗುವುದು. ಅರ್ಜಿದಾರರು ಇತರೆ ಯಾವುದೇ ಯೋಜನೆ, ಇಲಾಖೆ, ನಿಗಮಗಳಿಂದ ವಸತಿ ಸೌಲಭ್ಯವನ್ನು ಪಡೆದಿರಬಾರದು. ವಸತಿ ರಹಿತರು ಸ್ವಂತ ನಿವೇಶನ ಹೊಂದಿರಬೇಕು ಹಾಗೂ ನಿವೇಶನವು ಕುಟುಂಬದವರ ಹೆಸರಿನಲ್ಲಿ ನೊಂದಣಿಯಾಗಿರಬೇಕು. ಕನಿಷ್ಠ 20 ವರ್ಷಗಳವರೆಗೆ ನಿವೇಶನವನ್ನು ಪರಬಾರೆ ಮಾಡುವಂತಿಲ್ಲ. ಕುಟುಂಬದ ಒಟ್ಟು ವಾರ್ಷಿಕ ವರಮಾನ ರೂ.02 ಲಕ್ಷಗಳ ಮಿತಿಯೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜು ಅಸರು ಭವನದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ದೂ.08392-275751 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------