ಚಿಕ್ಕೋಡಿ

ಯೋಗದಿಂದ ರೋಗ ದೂರವಾಗುತ್ತದೆ: ಸಂಜಯ ಎಸ್ ಕುಷ್ಟಗಿಗಾರ

ಯೋಗದಿಂದ ರೋಗ ದೂರವಾಗುತ್ತದೆ: ಸಂಜಯ ಎಸ್ ಕುಷ್ಟಗಿಗಾರ

ಮಾಂಜರಿ 18 : ಈ ಒತ್ತಡದ ಬದುಕಿನಲ್ಲಿ ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ ಆರೋಗ್ಯ ಸಂಪತ್ತನ್ನು ಚೆನ್ನಾಗಿ ಕಾಯ್ದುಕೊಳ್ಳದೇ ರೋಗರುಜಿನಗಳು ಹೆಚ್ಚುತ್ತಿವೆ. ಆದುದರಿಂದ ನಿತ್ಯ ಕ್ರಮಬದ್ದ ಯೋಗಾಸನಗಳನ್ನು ಮಾಡುವುದರಿಂದ ರೋಗಗಳು ದೂರವಾಗುತ್ತವೆ ಎಂದು ರಾಯಬಾಗ ಪಟ್ಟಣದ ಪತಂಜಲಿ ಕರ್ನಾಟಕ ಸ್ಟೇಟ್ ಹೆಡ್ ಕಿಸಾನ್ ಸೇವಾ ಸಮಿತಿಯ ಸಂಜಯ್ ಎಸ್ ಕುಷ್ಟಗಿಗಾರ ಹೇಳಿದರು. 

ಸೋಮವಾರ ದಿನಾಂಕ 17ರಂದು   ಕೆ ಎಲ್ ಇ ವಾಣಿಜ್ಯ ಪದವಿ ಮಹಾವಿದ್ಯಾಲಯ ಎನ್ ಎಸ್ ಎಸ್  ಘಟಕದ ವತಿಯಿಂದ ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ಮೂರನೆ ದಿನದ "ಮಾದಕ ವ್ಯಸನಗಳ ನಿರ್ಮೂಲನೆಯಲ್ಲಿ ಯೋಗದ ಪಾತ್ರ" ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಮಾದಕ ವ್ಯಸನಗಳು  ಸಂಗ ದೋಷದಿಂದ ಮಾತ್ರ ಬರುತ್ತವೆ. ಈ ಮಾದಕ ವ್ಯಸನಗಳನ್ನು ಬಿಡಲು ದೃಢ ಮನಸ್ಸು ಬೇಕು. ಆದುದರಿಂದ ಶೈಕ್ಷಣಿಕ ಜೀವನದಲ್ಲಿ ತಾವೆಲ್ಲರೂ ಸಜ್ಜನರ ಸಂಗ ಮಾಡಿಕೊಂಡು ಉತ್ತಮ 

ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಂಡು  ಬದುಕುವ ಶ್ರೀಮಂತ ವಿಧಾನಗಳನ್ನು ಅರಿತುಕೊಳ್ಳಬೇಕೆಂದು  ಸೂಚ್ಯವಾಗಿ ಹೇಳಿದರು.  ಇಂದಿನ ರೈತರು ಬೆಳೆಗಳಿಗೆ ರಸಗೊಬ್ಬರ ಉಪಯೋಗ ಮಾಡುವುದೂ ಸಹಿತ ಮಾದಕ ವ್ಯಸನವೇ. ಆರೋಗ್ಯದ ಗುಟ್ಟು ನಿಮ್ಮ ಕೈಯಲ್ಲಿದೆ. ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಭಾಗ್ಯವೇ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಇದಕ್ಕೂ ಮೊದಲು ಆಗಮಿಸಿದ ಗಣ್ಯ ಮಹೋದಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಸಂಸ್ಥೆಯ ಸ್ಥಾನಿಕ  ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ  ಆಯ್ ಎ ಪಾಟೀಲ ಮಾತನಾಡಿ ಯೋಗ ಅಭ್ಯಾಸ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಬೆಳಗಿನ ವಾಯುವಿಹಾರ ಕ್ರಮಬದ್ಧವಾಗಿ ನಿತ್ಯ ಮೈಗೂಡಿಸಿಕೊಂಡು  ಆರೋಗ್ಯವಂತರಾಗಬೇಕು ಎಂದು ಹೇಳಿದರು.   ಆರಂಭದಲ್ಲಿ ಶಿಬಿರಾರ್ಥಿ ಕು ರಾಧಿಕಾ ಕಾಂಬಳೆ ಯೋಗದ ಮಹತ್ವ ಕುರಿತು ತನ್ನ ಅಭಿಮತ ವ್ಯಕ್ತಪಡಿಸಿದರು.  ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ  ಎಂ ಎಸ್ ಕೌಲಗುಡ್ಡ ಹಾಗೂ ವಾಣಿಜ್ಯ ವಿಭಾಗದ ಸಂಯೋಜಕರು, ಹಾಗೂ ಚುಟುಕು ಕವಿ ಪ್ರೊ ಎಲ್ ಎಸ್ ವಂಟಮೂರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕು. ಐಶ್ವರ್ಯ ಮಾನೆ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಕು. ಕಾಜಲ್ ಮಿರ್ಜೆ ಹಾಗೂ ಸಂಗಡಿಗರು ಭಾವೈಕ್ಯತಾ ಗೀತೆಗೆ ಕಂಠ ದಾನ ಮಾಡಿದರು. ಕು ಶ್ವೇತಾ ಭಾಮನೆ ಸ್ವಾಗತಿಸಿದರು. ಕು. ಲಕ್ಷ್ಮಿ ಘೋಸರವಾಡೆ ಹಾಗೂ ನಂದಿನಿ ಅಂಬಿ ನಿರೂಪಿಸಿದರು. ಕು ಅಂಕಿತಾ ಫಿರಾಜೆ ವಂದಿಸಿದರು. 


ಸುದ್ದಿ ಓದಿ