ಸೌಂದತ್ತಿ

ಯಲ್ಲಮ್ಮನಗುಡ್ಡವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು: ಸುಭಾಷ ಅಡಿ

ಯಲ್ಲಮ್ಮನಗುಡ್ಡವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು: ಸುಭಾಷ ಅಡಿ

ಉಗರಗೋಳ 28: ಸಮೀಪದ ಯಲ್ಲಮ್ಮನಗುಡ್ಡಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ಸುಭಾಷ ಅಡಿ ಕುಟುಂಬ ಸಮೇತ ಭಾನುವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. 

ದೇವಸ್ಥಾನ ವತಿಯಿಂದ ಸುಭಾಸ ಅಡಿ ಕುಟುಂಬವನ್ನು ಶಾಲೂಹೊದಿಸಿ ಸತ್ಕರಿಸಲಾಯಿತು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಿವೆ. ಯಲ್ಲಮ್ಮನಗುಡ್ಡವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು. ಇಲ್ಲಿನ ಅಂಗಡಿಗಳಲ್ಲಿ ಬಟ್ಟೆಯ ಚೀಲಗಳನ್ನು ಮಾರಾಟ ಮಾಡಬೇಕು. ಜತೆಗೆ ದೇವಸ್ಥಾನದ ವತಿಯಿಂದಲೂ ಭಕ್ತರಿಗೆ ಬಟ್ಟೆಯ ಚೀಲಗಳನ್ನು ಕೊಟ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ’ ಎಂದರು. 

‘ವಿವಿಧ ದೇವಸ್ಥಾನಗಳು, ಸರ್ಕಾರಿ ಶಾಲೆಗಳು, ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಜನರೂ ಕೈಜೋಡಿಸಬೇಕು’ ಎಂದು ಕರೆಕೊಟ್ಟರು. 

ಸುಧಾ ಸುಭಾಸ ಅಡಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿ ಬಿ ಮಹೇಶ, ಸಮಿತಿ ಸದಸ್ಯರಾದ ಕೋಳ್ಳಪ್ಪಗೌಡ ಗಂದಿಗವಾಡ, ವಾಯ್ ವಾಯ್ ಕಾಳಪ್ಪನವರ, ಎಮ್ ವ್ಹಿ ಮೂಳ್ಳೂರ, ಅಲ್ಲಮಪ್ರಭು ಪ್ರಭುನವರ, ಆರ್ ಎಸ್ ಸವದತ್ತಿ, ಪ್ರಭು ಹಂಜಗಿ, ಡಿ ಆರ್ ಚವ್ಹಾಣ, ಸದಾನಂದ ಈಟಿ, ಏಕನಗೌಡ ಮುದ್ದನಗೌಡ್ರ, ಗಣಪತಿಗೌಡ ಚನ್ನಪ್ಪಗೌಡ್ರ, ಪಂಡಿತ ಪಿ ರಾಜಶೇಖರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಹಾಗೂ ಅರ್ಚಕರು ಇದ್ದರು 


ಸುದ್ದಿ ಓದಿ