ಭಗವಂತ ಒಲಿವುದು ಭಕ್ತಿಗೆ, ಪೂಜೆಗಲ್ಲ : ಶಾಂತಮ್ಮ.
ಬಳ್ಳಾರಿ 31: ಭಗವಂತನು ಆಲಯ, ಚರ್ಚೆ , ಮಸೀದಿಗಳಲ್ಲಿ ಇರುವುದಿಲ್ಲ. ಭಕ್ತನ ಭಕ್ತಿಯ ಬಲೆಯಲ್ಲಿ ಸಿಲುಕಿರುತ್ತಾನೆ. ಆಡಂಬರದ ಪೂಜೆಗಿಂತ ಅನನ್ಯ ಭಕ್ತಿಗೆ ಮಾರುಹೋಗುವ ದೇವರ ದರ್ಶನ ವನ್ನು ಅಸಹಾಯಕ,ದೀನ, ದುರ್ಬಲ ರಲ್ಲಿ ಮಾಡಬೇಕೆಂದು, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಗೌಡ್ರ ಶಾಂತಮ್ಮ ನುಡಿದರು.
ಗುಗ್ಗರಹಟ್ಟಿಯ ವೀರಾಂಜನೇಯ ದೇವಸ್ಥಾನದಲ್ಲಿ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 289ನೇ ಮಹಾಮನೆ ಚಿಲುಗೋಡು ತಗ್ಗಿನಕೇರಿ ಮಠದ ಲಿಂ. ಚನ್ನಬಸಯ್ಯ ದಂಪತಿಗಳ ದತ್ತಿ ಮತ್ತು ಲಿಂ. ಮಿಂಚೇರಿ ಅಂಬಮ್ಮ ಶಿವಾರೆಡ್ಡಿ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ದೇವರ ಒಲುಮೆ ಇದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಕೊರಡು ಕೊನರಬಲ್ಲದು, ಬರಡು ಹಯನಾಗಬಲ್ಲದು, ವಿಷವು ಅಮೃತವಾಗಬಲ್ಲದೆಂದರು. ಅಬಕಾರಿ ಇಲಾಖೆಯ ನೌಕರರಾದ ಗುಜ್ಜಲ ನಾಗರಾಜು ಅತಿಥಿಗಳಾಗಿ ಮಾತನಾಡುತ್ತಾ ಪರಮಾತ್ಮನ ಒಲುಮೆಗಾಗಿ ಪುಣ್ಯಕ್ಷೇತ್ರಗಳನ್ನು ಸುತ್ತುವುದಕ್ಕಿಂತ ಅಂಧ, ಅನಾಥ, ದೀನ, ದಲಿತರ ಸೇವೆಯನ್ನು ಮಾಡಿದರೆ ಸಾಕೆಂದರು.
ಉ.ಜ.ಸಿ.ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಎಸ್.ಪಿ.ಹೊಂಬಳರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಎಂ.ಪುರುಷೋತ್ತಮ ಪ್ರಾರ್ಥನೆ ಮಾಡಿ, ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ, ದತ್ತಿಧಾತೃ, ದಾಸೋಹಿಗಳನ್ನು ಪರಿಚಯಿಸಿ, ಶರಣು ಸಮರ್ಪಣೆ ಮಾಡಿದರು. ವಕೀಲರಾದ ಮಲ್ಲಣ್ಣ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಜಿ.ಹನುಮಂತರೆಡ್ಡಿ, ಕೆ.ರಾಜೇಶ್ವರಿ. ಅಂಜಿನಮ್ಮ. ಉಮಾದೇವಿ ಎಸ್ ಹೊಂಬಳ ಮತ್ತು ಧ್ಯಾನ ಕೂಟದ ಸದಸ್ಯರು ಹಾಜರಿದ್ದರು. ವಿಶೇಷವಾಗಿ ಹೊಂಬಳ್ ದಂಪತಿಗಳು ಹಾಗೂ ಅತಿಥಿಗಳನ್ನು ಸನ್ಮಾನಿಸಿ, ಗೌರವಿಲಾಯಿತು