ರಾಣೆಬೆನ್ನೂರ

ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ ಕಾರ್ಯಕ್ರಮ

ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ ಕಾರ್ಯಕ್ರಮ


ಲೋಕದರ್ಶನ ವರದಿ 

ರಾಣಿಬೆನ್ನೂರ 14:  ದ್ವಿದಳ ಧಾನ್ಯಗಳು ಸಾರಜನಕ ಅಂಶವನ್ನು ಸ್ವತಃ ಉತ್ಪಾದಿಸುವ ಗುಣವನ್ನು ಹೊಂದಿವೆ ಮತ್ತು ಆಮ್ಲಜನಕ ವಿಷಯದಲ್ಲಿ ಪರಿಸರ ಸ್ನೇಹಿಯಾಗಿದೆ. ಆದ್ದರಿಂದ ಬೇಳೆಕಾಳುಗಳ  ಮಾನವನ ಮತ್ತು ಪರಿಸರ ಅಭಿವೃದ್ದಿಯ ಸ್ನೇಹಿಯಾಗಿವೆ. ಪ್ರೊಟೀನನಲ್ಲಿ ಸಮೃದ್ಧವಾಗಿವೆ, ಹೆಚ್ಚಿನ ಪ್ರಮಾಣದ ಆಹಾರದಲ್ಲಿನ ನಾರಿನಂಶ ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಆರೋಗ್ಯಕರ ಜೀವನ ಶೈಲಿಗೆ ಇವೆಲ್ಲವೂ ಅವಶ್ಯಕವಾಗಿವೆ ಎಂದು ನಗರದ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ಹೇಳಿದರು. 

   ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಥೂಲ ದೇಹಕಾಯ ಎಲ್ಲರ ಸಾಮಾನ್ಯ ಸಮಸ್ಯೆಯಾಗಿದೆ. ಮತ್ತು ಇದು ಹೃದಯ ಸಂಬಂಧಿ ಕಾಯಲೆಗಳಿಗೆ ಮುಖ್ಯ ಕಾರಣವಾಗಿದೆ. ಜನರು ಸ್ಥೂಲಕಾಯವನ್ನು ತೊಡೆದುಹಾಕಲು ದ್ವಿದಳ ಧಾನ್ಯಗಳ ಬಳಕೆ ಮಹತ್ವದಾಗಿದೆ ಎಂದರು. 

     ಈ ದಿನವು ಉತ್ತಮ ನೈಸರ್ಗಿಕ, ಸಾವಯವ ಮತ್ತು ಆಹಾರದ ಭಾಗದ ಅಗತ್ಯ ಅಂಶವಾಗಿ ದ್ವಿದಳ ಧಾನ್ಯಗಳ ಪರಿಬಾಷೆಯಲ್ಲಿ ಈ ಅಂಶಗಳನ್ನು ಪ್ರತಿಪಾದಿಸುತ್ತದೆ ಮತ್ತು ಅವುಗಳ ಮಾನವ-ಸ್ನೇಹಿ ಸ್ವಭಾವ ಮತ್ತು ಸಾರಜನಕ ಸಮೃದ್ಧಿಯು ಅಂತಿಮವಾಗಿ ಹವಾಮಾನ ಕ್ರಿಯೆಯನ್ನು ವ್ಯಾಖ್ಯಾನಿಸುತ್ತದೆ ಎಂದು ತಿಳಿಸಿದರು. 

    ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಅಶೋಕ ಪಿ ಮಾತನಾಡಿ, ದ್ವಿದಳ ಧಾನ್ಯಗಳ ದಿನಾಚರಣೆಯಿಂದ ಬೇಳೆಕಾಳು ಉತ್ಪಾದನೆಯು 70 ಮಿಲಿಯನ್ ಟನ್‌ಗಳಿಗೆ ದ್ವಿಗುಣಗೊಂಡಿತು ಮತ್ತು ಯಾವುದೇ ಕ್ಲಿಷ್ಟಕರ ವಾತಾವರಣದಲ್ಲಿ ಬೆಳೆಯಬಹುದಾದ ತಳಿಗಳ ಆವಿಷ್ಕಾರವೂ ಸಾಧ್ಯವಾಯಿತು. ಆದಾಗ್ಯೂ 2016 ರಲ್ಲಿ ಪ್ರಪಂಚದಲ್ಲಿ ಹೆಚ್ಚಿನ ಬೇಳೆ ಕಾಳುಗಳ ಕ್ಷೇತ್ರವು ಕೀಟ (40ಅ) ಭಾದೆಯಿಂದ ಹಾನಿಗೊಳಗಾಯಿತು. ಆಗ ಬರ ಸಹಿಷ್ಣುತೆ ಮತ್ತು ರೋಗ ಕೀಟಗಳಿಗೆ ಹೆಚ್ಚು ನಿರೋಧಕವಾಗಿರುವ ಪರಿಣಾಮಕಾರಿ ಮತ್ತು ಹವಾಮಾನ ಸ್ನೇಹಿಗುಣ ಹೊಂದಿರುವ ತಳಿಗಳ ಆವಿಷ್ಕಾರ ಅನಿವಾರ್ಯವಾಯಿತು ಎಂದರು.  

   ವಿಶ್ವ ಆಹಾರ ಸಂಸ್ಥೆಯ ಮೂಲಕ ನಡೆಸಿದ ಸಂಶೋಧನೆಗಳು ಬೇಳೆ ಕಾಳುಗಳು ಯಾವುದೇ ವಾತಾವರಣದಲ್ಲಿ ಬೆಳೆಯುವ ಪ್ರವೃತಿಯನ್ನು ಹೊಂದಿದ್ದು, ಹವಾಮಾನ ಸ್ನೇಹಿಯಾಗಿರುವ ತಳಿಗಳ ಅಭಿವೃದ್ಧಿಯಾಗಿತ್ತು. ಅವುಗಳಲ್ಲಿನ ಪ್ರೊಟೀನ್ ಖನಿಜ ಸಂಪತ್ತನ್ನು ಯಾವುದೇ ಆಹಾರದ ಮೂಲಕ್ಕೆ ಹೋಲಿಸಲಿಕ್ಕೆ ಆಗುವುದಿಲ್ಲ. ಈ ಕಾರಣಕ್ಕಾಗಿ 2016 ನೇ ವರ್ಷವನ್ನು ದ್ವಿದಳ ಧಾನ್ಯಗಳ ಅಂತರ್‌ರಾಷ್ಟ್ರೀಯ ವರ್ಷವೆಂದು ಹೆಸರಿಸಿ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ ಎಂದರು. 

ಪ್ರಾಧ್ಯಾಪಕ ಡಾ.ಎಮ್‌.ವಿ. ಮಂಜುನಾಥ ಮಾತನಾಡಿ, ಪೌಷ್ಟಿಕಾಂಶದ ಪ್ರಾಮುಖ್ಯತೆಯನ್ನು ನಿರ್ದಿಷ್ಟ ಪಡಿಸಲಾಗಿದೆ. ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ದಿನದ ಉದ್ದೇಶವು ವಿಶ್ವದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಸಿಗುವಂತೆ ಆರ್ಥಿಕಮಟ್ಟದಲ್ಲಿ ಆಹಾರ ಪದಾರ್ಥವಾಗಿ ಬೇಳೆಕಾಳುಗಳ ಮಹತ್ವವನ್ನು ಸಾರ್ವತ್ರಿಕವಾಗಿ ಸಿಗುವಂತೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಬೇಳೆ ಕಾಲುಗಳು ಮಾನವನಿಗೆ ಉತ್ತಮ ಆರೋಗ್ಯ ಮತ್ತು ಪ್ರಮುಖ ಪೋಷಕಾಂಶಗಳನ್ನು ಒದಗಿಸುವುದಲ್ಲದೇ ವಿಶ್ವ ವಾಣಿಜ್ಯಕತೆಯ ಮೂಲಕ ರೈತರಿಗೆ ಉತ್ತಮ ಆರ್ಥಿಕ ಬೆಂಬಲವನ್ನು ನೀಡುವುದಾಗಿದೆ ಎಂದರು. 

ವಿಜ್ಞಾನಿ ಡಾ. ರಾಜಕುಮಾರ ಜಿ.ಆರ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 35 ಕ್ಕೂ ಹೆಚ್ಚು ರೈತ ಮತ್ತು ರೈತರ ಮಹಿಳೆ ಭಾಗವಹಿಸಿದ್ದರು. 


ಸುದ್ದಿ ಓದಿ