ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ: ಮೀನಾಕ್ಷಿ
ಬೈಲಹೊಂಗಲ 31: ಮಹಿಳೆಯರು ಮೂಢನಂಬಿಕೆಗಳಿಂದ ದೂರವಾಗಿ ವಿಜ್ಞಾನದ ಬಗ್ಗೆ ಅರಿವು ಹೊಂದಿ ಸ್ವಉದ್ಯೋಗದಿಂದ ಹಾಗೂ ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯವಿದೆ ಎಂದು ಮೀನಾಕ್ಷಿ ಕುಡಸೋಮನ್ನವರ ಹೇಳಿದರು.
ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಗೋಕಾಕ-ಬೈಲಹೊಂಗಲ, ಕೈಮಗ್ಗ ಮತ್ತು ಜವಳಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಜರುಗಿದ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಪಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಯಾಗಲು ಉದ್ಯೋಗ ಹೊಂದಿ ಆರ್ಥಿಕವಾಗಿ ಸದೃಢವಾಗಿ ಸಮಾಜದಲ್ಲಿ ಮುಂದೆ ಬರಬೇಕೆಂದರು.
ಸಂಸ್ಥೆಯ ಮುಖ್ಯಸ್ಥೆ ಸುನಂದಾ ಪೊಲೀಸ್ ಪಾಟೀಲ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವುದೇ ಸಂಸ್ಥೆಯ ಉದ್ದೇಶವಾಗಿದ್ದು ಈ ಸಂಸ್ಥೆಯಲ್ಲಿ ಯುವತಿಯರಿಗೆ ಮಹಿಳೆಯರಿಗೆ 45 ದಿನಗಳವರೆಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುವುದಲ್ಲದೇ ಅವರ ಖಾತೆಗೆ 3500 ರೂ ಗಳನ್ನು ಹಾಕಿ ಅವರು ಹೊಲಿಗೆ ಯಂತ್ರ ಖರೀದಿಸಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಸಂಸ್ಥೆಯ ಮುಖ್ಯಸ್ಥ ವಾಯ್.ಎಚ್.ಕುರಿಹುಲಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಿಶು ಅಭಿವೃದ್ಧಿ ಅಧಿಕಾರಿ ರೇವತಿ ಹೊಸಮಠ, ಜ್ಯೋತಿ ದೇಶನೂರ, ಸುಮಲತಾ ಮೆಟಗುಡ್ಡ, ಸುಮಿತ್ರಾ ಅವಕ್ಕನವರ, ಆಗಮಿಸಿದ್ದರು.
ಹೊಲಿಗೆ ತರಬೇತಿ ಶಿಬಿರದಲ್ಲಿ ನೂರಾರು ಮಹಿಳೆಯರು ತರಬೇತಿ ಪಡೆದರು. ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಮಹಿಳೆಯರು ಇದ್ದರು.
ಸುನಂದಾ ಪೊಲೀಸ್ ಪಾಟೀಲ ಸ್ವಾಗತಿಸಿದರು. ಶೃತಿ ತಳವಾರ ನಿರೂಪಿಸಿ ವಂದಿಸಿದರು.