ರಾಷ್ಟ್ರೀಯ

ಇಂದು ವಿಶ್ವ ಅಂಚೆ ದಿನ: ಒಂದು ವಾರ ಅಂಚೆ ಸಾಪ್ತಾಹ: ಮೋದಿ ಶುಭ ಹಾರೈಕೆ

ಇಂದು ವಿಶ್ವ ಅಂಚೆ ದಿನ: ಒಂದು ವಾರ ಅಂಚೆ ಸಾಪ್ತಾಹ: ಮೋದಿ ಶುಭ ಹಾರೈಕೆ

ನವದೆಹಲಿ, ಸೆ 9 :ಮನೆಗಳಿಗೆ ಕಾಗದ ಪತ್ರಗಳು, ಪಾರ್ಸೆಲ್ ಗಳನ್ನು ಕೊಂಡೊಯ್ಯುವ, ತಲ ತಲಾಂತಗಳಿಂದಲೂ ಜನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂಚೆಯಣ್ಣನನ್ನು ಸ್ಮರಿಸುವ ದಿನ. ಇಂದು ವಿಶ್ವ ಅಂಚೆ  ದಿನ. ಈ ಹಿನ್ನೆಲೆಯಲ್ಲಿ ಇಂದಿನಿಂದ ಇದೇ  15ರವರೆಗೆ   ರಾಷ್ಟ್ರೀಯ  ಅಂಚೆ ಸಪ್ತಾಹ ಆಯೋಜಿಸಲಾಗಿದೆ. ಶನಿವಾರ  ಅಂಚೆ ಇಲಾಖೆಯಲ್ಲಿ ಬ್ಯಾಂಕಿಂಗ್  ದಿನ ಆಚರಿಸುತ್ತಿದ್ದು,  12ರ ಸೋಮವಾರದಂದು   ಅಂಚೆ  ಜೀವ ವಿಮಾ ದಿನ, 13ರಂದು ಅಂಚೆ ಚೀಟಿ ದಿನ,  14ರಂದು ವ್ಯಾಪಾರ  ಅಭಿವೃದ್ಧಿ ದಿನ ಹಾಗೂ  15ರಂದು  ಟಪಾಲು ದಿನವನ್ನಾಗಿ ಆಚರಿಸಲಾಗುತ್ತಿದೆ.    ಸಂಪರ್ಕದ ಪ್ರಮುಖ ಕೊಂಡಿಯಾದ  ಅಂಚೆ ಇಲಾಖೆ ನಾಗರಿಕ ಸಮಾಜದ  ಅವಿಭಾಜ್ಯ ಅಂಗವಾಗಿದೆ.  ಕಾಗದ ಪತ್ರ, ಪಾರ್ಸಲ್ ಗಳನ್ನು ತಂದುಕೊಡುವ  ಅಂಚೆ ಅಣ್ಣನಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಪಿಂಚಣಿ ಸೇರಿದಂತೆ ಹಲವಾರು  ಸೌಲಭ್ಯಗಳನ್ನು ಅಂಚೆ ಇಲಾಖೆ ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ   ಅಂಚೆ  ಇಲಾಖೆ  ಆಧುನೀಕರಣಗೊಂಡಿದ್ದು, ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ. ಬ್ಯಾಂಕಿಂಗ್  ಸೇವೆಯನ್ನು ಸಹ ಆರಂಭಿಸಿದ್ದು, ಎಟಿಎಂ ವ್ಯವಸ್ಥೆ  ಕಲ್ಪಿಸಿ, ನಗರ ಹಾಗೂ  ಗ್ರಾಮೀಣ  ಭಾಗದ ಜನತೆಗೆ  ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಬೇಟಿ ಬಚಾವೋ, ಬೇಟಿ  ಫಡಾವೋ ನಂತಹ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.ಕೊರೋನಾ ಸಂಕಷ್ಟ ಸಂದರ್ಭದಲ್ಲೂ ಜನ ಸಾಮಾನ್ಯರಿಗೆ ಸೇವೆ ಒದಗಿಸುತ್ತಿದೆ. ರಾಖಿ ಹಬ್ಬ ಸಂದರ್ಭದಲ್ಲಿ ಅಂಚೆ ಮೂಲಕ ರಾಖಿ ತಲುಪಿಸಿದ್ದು, ಶಿಕ್ಷಕರ ದಿನಗಳಂದು ಗುರುಗಳಿಗೆ ಶುಭಾಶಯ ಪತ್ರವನ್ನು ಸಹ ಪೂರೈಸಿದೆ. 

ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಹೊರ ಬರುವ ಅಂಚೆ ಚೀಟಿಗಳು ಇತಿಹಾಸದ ಭಾಗವಾಗಿದೆ. ಅಂಚೆ ಚೀಟಿಗಳು ಅಂದು, ಇಂದು, ಎಂದೆಂದಿಗೂ ನಾಗರಿಕ ಸಮಾಜಕ್ಕೆ ಅಪ್ಯಾಯಮಾನವಾದ ವಸ್ತುವಾಗಿದೆ. ಅಂಚೆ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದು, ಅಂಚೆ ದೇಶವನ್ನು ಸಂಪರ್ಕಿಸುತ್ತದೆ. ಅಸಂಖ್ಯಾತ ಜನರಲ್ಲಿ ಸಂತಸ ಮೂಡಿಸಿದೆ. ಈ ಸುದಿನದಂದು ಅಂಚೆ ಸಿಬ್ಬಂದಿ, ಅವರ ಕುಟುಂಬಕ್ಕೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

  


ಸುದ್ದಿ ಓದಿ