ರಾಷ್ಟ್ರೀಯ

ವಿಶ್ವ ಮಾನಸಿಕ ಆರೋಗ್ಯ ದಿನ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳಕ್ಕೆ ಒತ್ತು

ವಿಶ್ವ ಮಾನಸಿಕ ಆರೋಗ್ಯ ದಿನ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳಕ್ಕೆ ಒತ್ತು

ನವದೆಹಲಿ, ಅ 10 :ಇಂದು ವಿಶ್ವ ಮಾನಸಿಕ ಆರೋಗ್ಯ ದಿನ.  ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾನಸಿಕ ಆರೋಗ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದು ಈ ಬಾರಿಯ ಗುರಿಯಾಗಿದೆ. ಕೋವಿಡ್-19  ಸಂಕಷ್ಟ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯ, ರಕ್ಷಣೆ ಈ ಬಾರಿಯ ಬಹುದೊಡ್ಡ ಸವಾಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸೋಂಕು ನಿಯಂತ್ರಣದಲ್ಲಿ ತೊಡಗಿರುವ ಕೊರೋನಾ ಸೇನಾನಿಗಳು, ಆರೋಗ್ಯ ಕಾರ್ಯಕರ್ತರ ಸೇವೆ ಸ್ಮರಿಸುವ ಉದ್ದೇಶ ಹೊಂದಲಾಗಿದೆ.

ಸೋಂಕು ನಿಯಂತ್ರಣ ಉದ್ದೇಶದಿಂದ ಶಾಲಾ ಚಟುವಟಿಕೆಯಿಲ್ಲದೆ ಮನೆಯಲ್ಲಿಯೇ ವಿದ್ಯಾರ್ಥಿಗಳು ಇರುವುದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸಿದೆ. ವಿಶ್ವ ಮಾನಸಿಕ ಆರೋಗ್ಯ ದಿನದ ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಹೂಡಿಕೆ ಹೆಚ್ಚಿಸುವ ಧ್ಯೇಯ ಹೊಂದಲಾಗಿದೆ. ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಮನ್ನಣೆಯನ್ನು ಮಾನಸಿಕ ಆರೋಗ್ಯಕ್ಕೂ ಕೊಡಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಆಶಯವಾಗಿದೆ.

ಬರುವ ದಿನಗಳಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿ ಜಾರಿಗೊಳಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಹಣ ನಿಗದಿ ಮಾಡಬೇಕು. ಜಾಗತಿಕವಾಗಿ ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಹಣ ತೊಡಗಿಸದೆ ಆಗಿರುವ ನಿರ್ಲಕ್ಷ್ಯವನ್ನು ಸರಿಪಡಿಸುವುದು  ಪ್ರಮುಖ ಉದ್ದೇಶವಾಗಿದೆ.ಮಾನಸಿಕ ಆರೋಗ್ಯ ಕುರಿತು ಸಮಸ್ಯೆಗಳು ಮತ್ತು ವಿವಿಧ ಕಾರ್ಯಕ್ರಮಗಳು, ಚಿಕಿತ್ಸೆ ಕುರಿತು ಅರಿವು ಮೂಡಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮಾನಸಿಕ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸುವ ವಿಚಾರದಲ್ಲಿ ತೀರಾ ಹಿಂದುಳಿದಿದ್ದು, ಇದನ್ನು ಸರಿಪಡಿಸಬೇಕಾಗಿದೆ. ಇದೀಗ ಮಾನಸಿಕ ಚಿಕಿತ್ಸೆಗೆ ಒತ್ತು ನೀಡುವ ಕಾಲ ಎದುರಾಗಿದೆ. ಸಮಗ್ರ ಮತ್ತು ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. 

  


ಸುದ್ದಿ ಓದಿ