ಬೆಳಗಾವಿ

ಪಕ್ಷ, ಭಾಷೆ ನೋಡದೆ ಎಲ್ಲರ ಅಭಿವೃದ್ಧಿಗೆ ಕೆಲಸ: ಲಕ್ಷ್ಮೀ ಹೆಬ್ಬಾಳಕರ

ಪಕ್ಷ, ಭಾಷೆ ನೋಡದೆ ಎಲ್ಲರ ಅಭಿವೃದ್ಧಿಗೆ ಕೆಲಸ: ಲಕ್ಷ್ಮೀ ಹೆಬ್ಬಾಳಕರ


ಬೆಳಗಾವಿ, ಆ. 26: “ನಾನು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಯಾವ ಪಕ್ಷದವರು, ಯಾವ ಭಾಷೆಯವರು ಎಂಬುದನ್ನು ಎಂದಿಗೂ ನೋಡಿಲ್ಲ. ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ, ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ,” ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.  

ಕರಡಿಗುದ್ದಿ ಗ್ರಾಮದಲ್ಲಿ ಸುಮಾರು ?2.75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.  “ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೂ ನಗರ ಬಡಾವಣೆಗಳಲ್ಲಿ ದೊರೆಯುವ ರೀತಿಯಲ್ಲೇ ಉತ್ತಮ ಮೂಲಸೌಕರ್ಯ ಸೌಲಭ್ಯಗಳು ದೊರೆಯಬೇಕು. ಈ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬುದು ನನ್ನ ಆಶಯ,” ಎಂದರು.  

ಜನರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮಸ್ಥರ ಸಂಚಾರ ಹಾಗೂ ಮಳೆನೀರು ಹರಿದು ಹೋಗುವ ಸಮಸ್ಯೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.  

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಯುವರಾಜ ಕದಂ, ನಾಗೇಶ ದೇಸಾಯಿ, ಸಿದ್ದಪ್ಪ ಚೌಗುಲಾ, ಸದಾಶಿವ ಮೂಖನವರ, ಉಳವಪ್ಪ ಮಲನ್ನವರ, ಬಸವರಾಜ ರಾಚನ್ನವರ, ಮಹಾಂತೇಶ ರಾಜನ್ನವರ, ಹಾಲಪ್ಪ ನೇಸರಗಿ, ಅಶೋಕ ಮೂಖನವರ, ಗಿರಿಜಾ ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ