ಸೌಂದತ್ತಿ

ಚಂದ್ರಣ್ಣ ಶಾಮರಾಯನವರ ಕಾರ್ಯ ಮಾದರಿ: ಸಿದ್ದಲಿಂಗಶ್ರೀ

ಚಂದ್ರಣ್ಣ ಶಾಮರಾಯನವರ ಕಾರ್ಯ ಮಾದರಿ: ಸಿದ್ದಲಿಂಗಶ್ರೀ

ಸವದತ್ತಿ 13: ಸಮಾಜ ಸೇವೆಯನ್ನೇ ಗುರಿಯಾಗಿಸಿಕೊಂಡು ಬಡಜನರಿಗೆ ಅನುಕೂಲ ಕಲ್ಪಿಸಲು ಪುರಸಭೆ ಸದಸ್ಯ ಚಂದ್ರಣ್ಣ ಶಾಮರಾಯನವರ ಕಲ್ಮೇಶ್ವರ ಕಲ್ಯಾಣ ಮಂಟಪವನ್ನು ಲಕ್ಷಾಂತರ ರೂ.ಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಇನಾಂಹೊಂಗಲ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.  

ಪಟ್ಟಣದ ಬೇವಿನಕಟ್ಟಿ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಕಲ್ಮೇಶ್ವರ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಹೃದಯ ವಿಶಾಲತೆಯಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಪ್ರತಿಯೊಬ್ಬರು ಮಾಡಬೇಕಿದ್ದು, ಚಂದ್ರಣ್ಣ ಶಾಮರಾಯನವರ ಮಾಡಿರುವಂತ ಈ ಕಾರ್ಯ ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದರು. 

ಶಾಸಕ ವಿಶ್ವಾಸ ವೈದ್ಯ ಕಲ್ಮೇಶ್ವರ ಕಲ್ಯಾಣ ಮಂಟಪವನ್ನು ಉದ್ಘಾಟಿಸಿ ಮಾತನಾಡಿ, ಬಡ ಜನರು ತಮ್ಮ ಕುಟುಂಬದ ಕಲ್ಯಾಣ ಕಾರ್ಯಗಳನ್ನು ಮಾಡಿಕೊಳ್ಳಲು ದುಬಾರಿ ವೆಚ್ಚವನ್ನು ಕಲ್ಯಾಣ ಮಂಟಪಕ್ಕೆ ನೀಡುವ ಸಂದರ್ಭಗಳಿದ್ದು, ಅಂತಹ ಕುಟುಂಬಗಳಿಗೆ ಸೂಕ್ತ ಅನುಕೂಲತೆ ಮಾಡಿಕೊಟ್ಟಿರುವ ನಮ್ಮವರೆ ಆದಂತ ಮಹಾ ದಾನಿ ಚಂದ್ರಣ್ಣನವರ ಕಾರ್ಯವು ಪ್ರತಿಯೊಬ್ಬರು ಹೆಮ್ಮೆ ಪಡುವಂತ ವಿಷಯವಾಗಿದೆ ಎಂದರು. ಈ ಶುಭ ಕಾರ್ಯದಲ್ಲಿ ಒಂದು ವಿಕಲಚೇತನ ಜೋಡಿಗೆ ಮದುವೆ ಮಾಡಿದ ಪರೋಪಕಾರಿ ಕಾರ್ಯ ನಿಜಕ್ಕೂ ಶಾಮರಾಯನವರ ಹೃದಯವಂತಿಕೆ ತೋರಿಸುತ್ತದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಮಹಾಬಳೇಶ್ವರ ಪುರದಗುಡಿ ಅಧ್ಯಕ್ಷತೆವಹಿಸಿದ್ದರು. 

ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಯಾಣ ಮಂಟಪವನ್ನು ಅಂದಾಜು 40 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿ ನಿಸ್ವಾರ್ಥ ಭಾವನೆಯಿಂದ ಸಮಾಜಕ್ಕೆ ಸಮರ​‍್ಿಸಿದ ಚಂದ್ರಣ್ಣ ಶಾಮರಾಯನವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.  ಕಲ್ಯಾಣ ಮಂಟಪ ನಿರ್ಮಾಣದ ಹಂತದಲ್ಲಿ ಕಾರ್ಯ ನಿರ್ವಹಿಸಿ ಸಹಕರಿಸಿದ ಯಲ್ಲಪ್ಪ ಮಡಿವಾಳರ, ಸುಭಾಸ ಅರಗಂಜಿ, ಸುರೇಶ ಗೊಬ್ಬರಗುಂಪಿ, ಅಪ್ಪಯ್ಯ ಹೂಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ ಶಾಮರಾಯನವರ, ಶಿವಾನಂದ ಪಟ್ಟಣಶೆಟ್ಟಿ, ಡಾ.ಎಮ್‌.ಎಸ್‌.ಅಮೋಘಿಮಠ, ಸುರೇಶ ಚೋಪ್ರಾ, ಬಸವರಾಜ ಪುರದಗುಡಿ, ಕಲ್ಲಪ್ಪ ಪೂಜಾರ, ಧರೆಪ್ಪ ಮಡ್ಲಿ, ಬಸವರಾಜ ಗುರಣ್ಣವರ, ಉಮೇಶ ಬಾಳಿ, ಬೇವಿನಕಟ್ಟಿ ಓಣಿಯ ಗುರು ಹಿರಿಯರು ಹಾಗೂ ಕಲ್ಮೇಶ್ವರ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ