ಕಾಯಕವೇ ಕೈಲಾಸ; ಕುಂಬಾರ ಸಮಾಜದ ಸೇವೆ ಸಮಾಜಕ್ಕೆ ಮಾದರಿ: ಬಸವಲಿಂಗ ಮಹಾಸ್ವಾಮೀಜಿ
ಲೋಕದರ್ಶನ ವರದಿ
ಕಾಗವಾಡ 14 : ತಮ್ಮ ಜೀವನೋಪಾಯಕ್ಕಾಗಿ ಮಾಡುವ ಕೆಲಸ ದುಡಿಮೆ, ಸಮಾಜದ ಒಳಿತಿಗಾಗಿ ಮಾಡುವ ಕೆಲಸ ಕಾಯಕ. ಅಂತಹ ಕಾಯಕವನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವ ಕುಂಬಾರ ಸಮಾಜವು ಬಸವಣ್ಣನವರ "ಕಾಯಕವೇ ಕೈಲಾಸ" ಎಂಬ ತತ್ವಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರು ಹಾಗೂ ಉಗಾರ ಖುರ್ದ್ ಗುರುದೇವಾಶ್ರಮದ ಪೂಜ್ಯ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು. ಉಗಾರ ಖುರ್ದ್ ಪಟ್ಟಣದ ಜೈನ ಸಮಾಜ ಸಭಾಭವನದಲ್ಲಿ ಮಂಗಳವಾರ ನಡೆದ ಭಕ್ತ ಕುಂಬಾರ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಹಾಗೂ ಶಿವಶರಣ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘವು ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಇಂದು ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ಇದೇ ರೀತಿ ಮುಂದೆಯೂ ಸಮಾಜದ ಪ್ರಗತಿಗೆ ಶ್ರಮಿಸಲಿ ಎಂದು ಆಶೀರ್ವದಿಸಿದರು. ಹಂಚಿನಾಳದ ಪೂಜ್ಯ ಮಹೇಶಾನಂದ ಶ್ರೀಗಳು ಮಾತನಾಡಿ, 12ನೇ ಶತಮಾನದ ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯನವರ ಆದರ್ಶಗಳನ್ನು ಅನುಸರಿಸಿ ಸಮಾಜದ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕುಂಬಾರ ಸಮಾಜದ ಸುಮಂಗಲಿಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ, ಕುಂಭೋತ್ಸವ ಮೆರವಣಿಗೆಯ ಮೂಲಕ ಮಹಾದೇವ ಮಂದಿರಕ್ಕೆ ಆಗಮಿಸಿ ಶಿವಲಿಂಗಕ್ಕೆ ಜಲಾಭಿಷೇಕ ನೆರವೇರಿಸಿದರು. ಬಳಿಕ ನಡೆದ ಸಮಾರಂಭವನ್ನು ಶ್ರೀಗಳು ಹಾಗೂ ಗಣ್ಯರು ಶಿವಶರಣ ಕುಂಬಾರ ಗುಂಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆನಂದ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಂಬಾರ ಸಮಾಜದ ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಹಿರಿಯ ದಂಪತಿಗಳು ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗುಳೇದಗುಡ್ಡ, ಚಿಕ್ಕಲಗುಡ್ಡ ಕಿತ್ತೂರು, ಮಂಗಸೂಳಿ, ಚಿಂಚಣಿ, ಚಿಂಚಲಿ ಹಾಗೂ ಕನಕೊಳ ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಸಮಾಜದ ಮುಖಂಡರು, ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಸಮಾಜದ ಬಾಂಧವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಭಾಷ್ ಕುಂಬಾರ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.