ಬೆಳಗಾವಿ

ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ ಎ. ರುಕ್ಮಿಣಿ

ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿ

ಲೋಕದರ್ಶನ ವರದಿ 

ಬೆಳಗಾವಿ 25 : ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರ ಸಬಲೀಕರಣ ಹಾಗೂ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಕ್ಕ ಪಡೆಯ ಪಿಎಸ್‌ಐ ಎ. ರುಕ್ಮಿಣಿ ಹೇಳಿದರು. ತಾಲೂಕಿನ ಅನಗೋಳ ಗ್ರಾಮದ ಆದಿನಾಥ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ‘ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಒತ್ತಡ ನಿರ್ವಹಣೆ’ ವಿಷಯದ ವಿಚಾರಗೋಷ್ಠಿ ಉದ್ಘಾಟಿಸಿ, ಮಾಸಾಶನ ಹಾಗೂ ವಿದ್ಯಾನಿಧಿ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. 

ಮಹಿಳೆಯರು ತಮ್ಮ ಹಕ್ಕುಗಳು, ಜವಾಬ್ದಾರಿಗಳು ಹಾಗೂ ಸರ್ಕಾರ ಮತ್ತು ವಿವಿಧ ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಹೊಂದಿರಬೇಕು. ಲಭ್ಯವಿರುವ ಯೋಜನೆಗಳನ್ನು ಸಮರ​‍್ಕವಾಗಿ ಬಳಸಿಕೊಂಡು ಕುಟುಂಬದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.  ಪ್ರಾದೇಶಿಕ ನಿರ್ದೇಶಕ ದಯಾಶೀಲ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಬೆಳವಣಿಗೆ ಹಾಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸುವುದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದರು. 

ವೈದ್ಯೆ ಡಾ. ಸುಮಿತಾ ರತನ್‌ಜಿ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಮಹಿಳೆಯರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಒತ್ತಡದಿಂದ ಎದುರಾಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ವಿವರಿಸಿ, ಮಹಿಳೆಯರ ಪ್ರಶ್ನೆಗಳಿಗೆ ಉತ್ತರಿಸಿ ಆರೋಗ್ಯದ ಕುರಿತು ಸಲಹೆಗಳನ್ನು ನೀಡಿದರು. 

ನ್ಯಾಯವಾದಿ ಡಾ. ಜಿ.ಆರ್‌. ಸೋನೆರ್ ಮಾತನಾಡಿ, ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ಶಿಸ್ತು ಅತ್ಯಗತ್ಯ. ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ಮೂಲಕ ಆರ್ಥಿಕ ಸ್ಥಿರತೆ ಸಾಧಿಸಬಹುದು ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖುರ್ಷಿದಾ ಡಿ. ಮುಲ್ಲಾ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ್‌, ಜಿಲ್ಲಾ ಜನಜಾಗೃತಿ ಸದಸ್ಯರಾದ ವಿನೋದ್ ಜಗಜಂಪಿ ಹಾಗೂ ಪ್ರಭಾಕರ ಕುಂದೂರು, ತಾಲೂಕಿನ ಯೋಜನಾಧಿಕಾರಿಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ, ತಾಲೂಕಿನ ಸಂಯೋಜಕಿಯರು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು 


ಸುದ್ದಿ ಓದಿ