ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ: ಡಾ.ಕುಬೇರಪ್ಪ
ರಾಣೀಬೆನ್ನೂರ 02: ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ 2020-21ನೇ ಸಾಲಿನ ವಿದ್ಯಾರ್ಥಿನಿ ಒಕ್ಕೂಟ ಯುವ ರೆಡ್ಕ್ರಾಸ್ ರೆಡ್ರಿಬ್ಬನ್ಕ್ಲಬ್ ಹಾಗೂ ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಡಾ.ಆರ್.ಎಂ.ಕುಬೇರಪ್ಪ ಅವರು ಮಾತನಾಡಿ ಮಹಿಳೆಯರು ಸಮಾಜಮುಖಿಯಾಗಿ ಸಾರ್ವಜನಿಕ ರಂಗದಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ. ಆರಂಭದಲ್ಲಿ ಉನ್ನತ ಶಿಕ್ಷಣದಲ್ಲಿ ತಮ್ಮ ಸಾಮರ್ಥ್ಯ ಮೆರೆದಾಗ ಮಾತ್ರ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಕರ್ತವ್ಯ ಮೆರೆಯಬಹುದಾಗಿದೆ ಎಂದ ಅವರು ಮಡಿವಂತಿಕೆ ಸಲ್ಲದು ಮಾಡುವ ಕಾರ್ಯದಲ್ಲಿ ಅಚಲ ವಿಶ್ವಾಸ ಮತ್ತು ಭರವಸೆ ಇಟ್ಟುಕೊಂಡಾಗ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯವಾಗುವುದು ಎಂದರು.
ಅಬಕಾರಿ ಇಲಾಖೆಯ ಅಧಿಕಾರಿ ರೇಖಾ ಗಣೇಶ ತೋಟದ ಅವರು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಸರಳವಾಗಿ ಎದುರಿಸಬಹುದು. ಅದಕ್ಕೆ ಕಾರಣ ಬಹು ತಂತ್ರಜ್ಞಾನ ಮಾಧ್ಯಮ ಮಾಹಿತಿ ಆಳವಾಗಿ ಅಧ್ಯಯನ ಅದಕ್ಕೆ ನಿಗದಿತ ಸಮಯ ಕಾಯ್ದಿರಿಸಿಕೊಂಡರೆ ಎಲ್ಲವೂ ಸುಲಭವಾಗಿ ಸಾಧಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ
ಹೆಚ್.ಎ.ಬಿಕ್ಷಾವರ್ತಿಮಠ, ಎಸ್.ಎ.ತಾಂಬೆ, ಕೆ.ಕೆ. ಹಾವಿನಾಳ ಉಪಪ್ರಾಚಾರ್ಯ ಬಿ.ಯು. ಮಾಳೇನಹಳ್ಳಿ, ಡಾ. ಪುಷ್ಪಾಂಜಲಿ ಎನ್.ಕಾಂಬಳೆ ಹಾಗೂ ರೆಡ್ಕ್ರಾಸ್ ಮತ್ತು ರೆಡ್ ರಿಬ್ಬನ್ಕ್ಲಬ್ ಸಂಯೋಜನಾಧಿಕಾರಿ ಪೃಥ್ವಿರಾಜ ಎಂ.ಕಟ್ಟಿಮನಿ, ದೇವರಾಜ ಹಂಚಿನಮನಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಪ್ರಾಚಾರ್ಯ ಡಾ. ಸುರೇಶ ಬಣಕಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇಷ್ಮಾ ಬಣಕಾರ, ಸ್ವಾಗತಿಸಿದರು. ಅಕ್ಷತಾ ನಿರೂಪಿಸಿ, ನೇತ್ರಾವತಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶ್ವೇತಾ ಮಾಳಗಿ ವಂದಿಸಿದರು.