ಸಿಂಧಗಿ

ಸಮಾಜ,ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ

ಸಮಾಜ,ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ


ಸಿಂದಗಿ20: ಹೆಣ್ಣು ಇಂದು ಎಲ್ಲ ರಂಗದಲ್ಲೂ ಸಾಧನೆ ಮೆರೆದಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತು ಪಡಿಸಿದ್ದಾಳೆ ಎಂದು ಸ್ಥಳೀಯ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವೀನ್ ಡಿ’ಸೋಜ ಹೇಳಿದರು. 

ಪಟ್ಟಣದ ಸಂಗಮ ಸಂಸ್ಥೆಯ ಸಭಾಭವನದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಸಿಂದಗಿ ತಾಲೂಕ ಸ್ಪೂರ್ತಿ ಮಹಿಳಾ ಸಂಘಗಳ ಒಕ್ಕೂಟ  ಇವರ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರಿಗೆ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಶಾಲೆ ಕಾಲೇಜುಗಳ ಶಿಕ್ಷಣ, ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ ಮುಂದೆ ಉದ್ಯೋಗಶೀಲರನ್ನಾಗಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪ್ರೋತ್ಸಾಹದ ಅಗತ್ಯವಿದೆ. ಮಹಿಳೆಗೆ ಸಮಾನ ಅವಕಾಶಗಳನ್ನು ಇತರರು ಕೊಡುವುದಲ್ಲ, ಅದು ಪ್ರತಿಯೊಬ್ಬ ಮಹಿಳೆಯ ಹಕ್ಕು. ಅನೇಕ ಮಹಿಳೆಯರು ಕುಟುಂಬ, ಸಂಸಾರಕ್ಕಾಗಿ ತ್ಯಾಗ ಮಾಡುತ್ತಾರೆ. ಶಿಕ್ಷಣ ಪಡೆಯುವಾಗ ಉತ್ತಮ ಸಾಧನೆ ಮಾಡುವ ಮಹಿಳೆಯರು ಮದುವೆಯ ನಂತರವೂ ಸಾಧನೆಯ ಪಥದಿಂದ ವಿಮುಖರಾಗಬಾರದು. ಸುಸ್ಥಿರ ಅಭಿವೃದ್ಧಿಗೆ ಸಮಾನತೆ ಎಲ್ಲಾ ರಂಗಗಳಲ್ಲಿ ಬರಬೇಕು ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ಇನ್ನರ್ ವ್ಹಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಮಾತನಾಡಿ, ಮಹಿಳೆಯರು ಪ್ರತಿನಿತ್ಯ ಮನೆಯ ಒಳಗೆ ಮತ್ತು ಸಮಾಜದ ಅಂಗಳದಲ್ಲಿ ಹೋರಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎರಡು ಪಟ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಒಬ್ಬ ಹೆಣ್ಣು ಮತ್ತೊಬ್ಬ ಸ್ತ್ರೀಯನ್ನು ಪ್ರೋತ್ಸಾಹಿಸುವ ಮನೋಭಾವ ಕುಟುಂಬಗಳಲ್ಲಿ ಬೆಳೆಯಬೇಕು. ಮಹಿಳೆಯರ ವಿಕಾಸವಾದರೆ ಇಡೀ ಕುಟುಂಬ ವಿಕಾಸವಾದಂತೆ ಎಂದು ಹೇಳಿದರು. 

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಮಾತನಾಡಿ, ಮಹಿಳೆ ಸಮಾಜದ ಶಕ್ತಿಯಾಗಿದ್ದು, ಕುಟುಂಬದ ಕಣ್ಣು ಕೂಡ ಆಗಿದ್ದಾಳೆ. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯ ಛಾಪು ಮೂಡಿಸಿದ್ದಾಳೆ. ಹಿಂದೆ ಬೆರಳಣಿಕೆಯಷ್ಟು ಮಹಿಳೆಯರು ಮನೆಯಿಂದ ಹೊರ ಬಂದು ದುಡಿಯುತ್ತಿದ್ದರು. ಈಗ ಗಡಿ ಕಾಯುವುದ ರಿಂದ ಹಿಡಿದು ಕುಟುಂಬದ ಪ್ರತಿ ಕೆಲಸವನ್ನೂ ಅತ್ಯಂತ ಸಮರ್ಥವಾಗಿ ಮಹಿಳೆ ನಿರ್ವಹಿಸುತ್ತಿದ್ದಾಳೆ. ಪ್ರತಿ ಕೆಲಸವನ್ನೂ ನಿರ್ವಹಿಸುವ ಶಕ್ತಿ, ತಾಳ್ಮೆ, ಉತ್ಸಾಹ ಮಹಿಳೆಗಿದೆ ಎಂದರು. 

ಇದರ ಮಧ್ಯೆಯೂ ಕೌಟುಂಬಿಕ ದೌರ್ಜನ್ಯಕ್ಕೆ ಹಲವು ಮಹಿಳೆಯರು ಬಲಿಯಾಗುತ್ತಿದ್ದು, ಅವರಿಗೆ ಧೈರ್ಯ ತುಂಬಿ, ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಹಿಳೆಯ ಸಾಮರ್ಥ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಹಾಗೂ ಆಕೆಯನ್ನು ಗೌರವ ಯುತವಾಗಿ ನಡೆಸಿ ಕೊಳ್ಳುವುದು ನಾಗರಿಕ ಸಮಾಜದ ಮುಖ್ಯ ಗುಣವಾಗಿರಬೇಕು. ಮಹಿಳೆ ಯರು ಸಂವಿಧಾನ ನೀಡಿರುವ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವೀಚಾರಕಿ ಎಸ್‌.ಕೆ ಮಣೂರ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. 

ಶಾರದಾ ಮಂಗಳೂರ, ಜಯಶ್ರೀ ಹದನೂರ ಸೇರಿದಂತೆ ಸಂಗಮ ಸಂಸ್ಥೆಯ ಎಲ್ಲ ಕಾರ್ಯಕರ್ತೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  

ಸ್ಪೂರ್ತಿ ಒಕ್ಕೂಟದ ಅಧ್ಯಕ್ಷೆ ಸವಿತಾ ಇವಣಿ ಸ್ವಾಗತಿಸಿದರು. ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ವಿಜಯ ಬಂಟನೂರ ವಂದಿಸಿದರು. 


ಸುದ್ದಿ ಓದಿ