ಪರಿಶ್ರಮದಿಂದ ಯಶಸ್ಸಿನ ಶಿಖರ ತಲುಪಲು ಸಾಧ್ಯ: ಡಾ. ಲೋಕಾಪುರ
ಮಾಂಜರಿ 23: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟವಾದ ಗುರಿ, ಯೋಜನೆ, ಸತತ ಅಧ್ಯಯನ, ಪ್ರಯತ್ನಶೀಲತೆ, ಸಮಯದ ಮಹತ್ವ ಹಾಗೂ ಸೂಕ್ತ ಪರಿಶ್ರಮದಿಂದ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಿಗದಿತ ಗುರಿ ಮತ್ತು ಕಂಡ ಕನಸು ಸಾಕಾರಗೊಂಡು ಯಶಸ್ಸಿನ ಶಿಖರ ತಲುಪಲು ಸಾಧ್ಯ ಎಂದು ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಹೇಳಿದರು.
ಚಿಕ್ಕೋಡಿ ನಗರದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ 2025- 26ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನ ಭವಿಷ್ಯದ ಬಂಗಾರದ ಬದುಕನ್ನು ರೂಪಿಸಿಕೊಳ್ಳಲು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಹು ಮುಖ್ಯ ಪಾತ್ರವಾಗುತ್ತದೆ. ಶಿಕ್ಷಣ ನಮ್ಮ ಒಳಗಿನ ಅರಿವಿನ ವಿಸ್ತಾರದ ಚಿಲುಮೆಯಾಗಿ ಬೆಳಗಬೇಕು. ಬದುಕು ಸಂತೋಷದ ಸ್ಫೂರ್ತಿ ಸಂಘರ್ಷ ಅಲ್ಲ. ಬಡತನ ಸಮಸ್ಯೆ ಅಲ್ಲ ಅದನ್ನು ತೊಡೆದು ಹಾಕುವುದು ಮುಖ್ಯ. ನಕಾರಾತ್ಮಕ ವಿಚಾರ ಬಿಟ್ಟು ಧನಾತ್ಮಕ ಯೋಚನೆ ಯಾವಾಗಲೂ ಇರಬೇಕು.ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುವಂತೆ ಜೀವನೋತ್ಸಾಹದಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮಿಸಿದರೆ ಸಾಧನೆ ಮಾಡುವುದು ಖಚಿತ ಕಿವಿಮಾತು ಹೇಳಿದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎನ್. ಎಸ್. ವಂಟಮುತ್ತೆ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಭಾಗವಹಿಸಿ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಿ ಕುಲಕರ್ಣಿ ಮಾತನಾಡಿ ಪಠ್ಯ ಮತ್ತು ಪಠ್ಯೇತರ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದು ಹಾಗೂ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ ಅವಿಭಾಜ್ಯ ಅಂಗವಾಗಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಘಟನಾತ್ಮಕ ಕೌಶಲ್ಯ ಬೆಳಿಸುತ್ತದೆ. ಸೋಲು ಮತ್ತು ಗೆಲುವನ್ನು ವಿನಮ್ರತೆಯನ್ನು ಸ್ವೀಕರಿಸಬೇಕು. ಭಾರತ ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ದೇಶದ ಗೌರವವನ್ನು ಹೆಚ್ಚಿಸುತ್ತಿರುವುದು ಇಂದಿನ ಯುವ ಪೀಳಿಗೆಳೆಗೆ ಸ್ಪೂರ್ತಿದಾಯಕ ಮತ್ತು ಸವಾಂರ್ಗೀಣ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಎಂದು ಹೇಳಿದರು.
ದೈಹಿಕ ನಿರ್ದೇಶಕ ಪ್ರೊ. ಪ್ರವೀಣ ವಾಘ್ಮೋರೆ, ಪ್ರೊ. ರಾಜೇಶ್ ನಾಯ್ಕ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹಾಶ್ವೇತ ಬೀಷ್ಠೆ ಪ್ರಾರ್ಥನಾಗೀತೆ ಹಾಡಿದರು. ಪ್ರೊ. ಎಂ. ಆರ್. ಛಾಯಾ ಸ್ವಾಗತಿಸಿದರು. ಡಾ. ಎಚ್. ಇ. ಬಸವರಾಜಪ್ಪ ಅತಿಥಿ ಪರಿಚಯಿಸಿದರು. ಆಯ್‌ಕ್ಯೂಎಸಿ ಸಂಯೋಜಕ ಡಾ. ವಿ. ವಿ. ಮಜಲಾಪೂರ ವಂದಿಸಿದರು. ಲೆಫ್ಟಿನೆಂಟ್ ಪ್ರೊ. ಎಸ್. ಕೆ. ನಾಯ್ಕ ಮತ್ತು ಪ್ರೊ. ಪದ್ಮಶ್ರೀ ಚೌಗಲಾ ನಿರೂಪಿಸಿದರು.